ಬೆಂಗಳೂರು: ಟೀಂ ಇಂಡಿಯಾ 2007 ರ ಇದೇ ದಿನದಂದು ಐಸಿಸಿ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಚೊಚ್ಚಲ ಟಿ20 ವಿಶ್ವಕಪ್ ಗೆಲುವಿಗೀಗ 14 ವರ್ಷಗಳ ಸಂಭ್ರಮ.
ಅಂದು ತಂಡವನ್ನು ಮುನ್ನಡೆಸಿದ ಯುವ ನಾಯಕ ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ಪಂಡಿತರ ಲೆಕ್ಕಾಚಾರವನ್ನೆಲ್ಲ ತಲೆಕೆಳಗಾಗಿಸಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಐದು ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು.
ಗೌತಮ್ ಗಂಭೀರ್ (75) ಹಾಗೂ ರೋಹಿತ್ ಶರ್ಮಾ (30*) ಉಪಯುಕ್ತ ಬ್ಯಾಟಿಂಗ್ ನೆರವಿ ನಿಂದ ಐದು ವಿಕೆಟ್ ನಷ್ಟಕ್ಕೆ 157 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು.
ಗುರಿ ಬೆನ್ನತ್ತಿದ ಪಾಕಿಸ್ತಾನ 104 ರನ್ನಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕೊನೆಯ ಹಂತದಲ್ಲಿ ನಾಯಕ ಮಿಸ್ಬಾ ಉಲ್ ಹಕ್ ದಿಟ್ಟ ಹೋರಾಟ ನೀಡುವ ಮೂಲಕ ಪಂದ್ಯವು ರೋಚಕ ಹಂತವನ್ನು ತಲುಪಿತ್ತು. ಆದರೆ ಮಿಸ್ಬಾ (43 ರನ್) ವಿಕೆಟ್ ಪಡೆದ ಜೋಂಗಿದರ್ ಶರ್ಮಾ ಭಾರತಕ್ಕೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.
ಅರೆಕಾಲಿಕ ಬೌಲರ್ ಜೋಂಗಿದರ್ ಶರ್ಮಾ ಅವರಿಗೆ ಕೊನೆಯ ಓವರ್ ನೀಡಿದ ನಾಯಕ ಧೋನಿ ನಿರ್ಧಾರವು ಭಾರತದ ಅದೃಷ್ಟವನ್ನೇ ಬದಲಿಸಿತ್ತು. ಮಿಸ್ಬಾ ಹೊಡೆದ ಚೆಂಡು ಶ್ರೀಶಾಂತ್ ಕೈಯಲ್ಲಿ ಭದ್ರವಾಗಿ ಸೇರುವುದರೊಂದಿಗೆ ಭಾರತವು ಇತಿಹಾಸ ರಚಿಸಿತ್ತು.