Saturday, 16th November 2024

Mike Tyson: ದಿಗ್ಗಜ ಮೈಕ್ ಟೈಸನ್‌ಗೆ ಸೋಲುಣಿಸಿದ ಯುವ ಬಾಕ್ಸರ್‌

20 ವರ್ಷಗಳ ಬಳಿಕ ಮೊದಲ ಬಾರಿಗೆ ಮತ್ತೆ ಬಾಕ್ಸಿಂಗ್ ಅಖಾಡಕ್ಕೆ ಇಳಿದಿದ್ದ ಬಾಕ್ಸಿಂಗ್ ಲೋಕದ ಲೆಜೆಂಡ್ ಮೈಕ್ ಟೈಸನ್(Mike Tyson) ಶನಿವಾರ ನಡೆದ ಜೇಕ್ ಪಾಲ್(Jake Paul) ವಿರುದ್ಧದ ಪಂದ್ಯದಲ್ಲಿ 79-73 ಅಂತರದಿಂದ ಸೋತು ನಿರಾಸೆ ಕಂಡಿದ್ದಾರೆ. 2003ರಲ್ಲಿ ಮೈಕ್ ಟೈಸನ್ ಕೊನೆಯದಾಗಿ ಬಾಕ್ಸಿಂಗ್‌ ಪಂದ್ಯವನ್ನು ಗೆದ್ದಿದ್ದರು. 2004 ಮತ್ತು 2005ರಲ್ಲಿ ಸೋಲನುಭವಿಸಿದ ಬಳಿಕ ಬಾಕ್ಸಿಂಗ್‌ನಿಂದ ದೂರವುಳಿದಿದ್ದರು. ಇದಾದ ಬಳಿಕ 20 ವರ್ಷಗಳ ಬಳಿಕ ಅವರು ಮತ್ತೆ ಬಾಕ್ಸಿಂಗ್‌ ರಿಂಗ್‌ಗೆ ಮರಳಿದ್ದರು. ಹೀಗಾಗಿ ಅಭಿಮಾನಿಗಳ ಪಾಲಿಗೆ ಈ ಪಂದ್ಯ ವಿಶೇಷವಾಗಿತ್ತು.

ಆರಂಭಿಕ ಸುತ್ತಿನಲ್ಲಿ ನಿಧಾನಗತಿಯಲ್ಲಿ ಆಡಿದ 58 ವರ್ಷದ ಟೈಸನ್ ಆ ಬಳಿಕ ಆಕ್ರಮಣಕಾರಿ ಪಂಚ್‌ಗಳ ಮೂಲಕ ಸತತವಾಗಿ ಅಂಕಗಳಿಸಿದರು. ಆದರೂ ಅಂತಿಮವಾಗಿ 6 ಅಂಕಗಳ ಹಿನ್ನಡೆಯಿಂದ ಸೋಲು ಕಂಡರು. ಗೆಲುವಿನ ಬಳಿಕ ಮಾತನಾಡಿದ 27 ವರ್ಷದ ಯುವ ಬಾಕ್ಸರ್ ಜೇಕ್ ಜೇಕ್ ಪಾಲ್, ಇದೊಂದು ಸ್ಮರಣೀಯ ಪಂದ್ಯವಾಗಿತ್ತು. ಪಂದ್ಯವನ್ನು ನಾನು ಗೆದ್ದಿರಬಹುದು. ಆದರೆ ನನ್ನ ಮನದಲ್ಲಿ ಈ ಪಂದ್ಯವನ್ನು ಗೆದ್ದಿರುವುದು ಟೈಸನ್. ಏಕೆಂದರೆ ಅವರೊಬ್ಬ ದಿಗ್ಗಜ ಬಾಕ್ಸರ್‌, ಈ ಇಳಿ ವಯಸ್ಸಿನಲ್ಲಿಯೂ ಅವರು ಇಂತಹ ಪ್ರದರ್ಶನ ತೋರುಲು ಸಾಧ್ಯವಾಗುತ್ತದೆ ಎಂದರೆ ಅವರ ಸಾಮರ್ಥ್ಯ ಮೆಚ್ಚಲೇ ಬೇಕು ಎಂದು ಹೇಳುವ ಮೂಲಕ ಟೈಸನ್‌ಗೆ ಗೌರವ ಸೂಚಿಸಿದರು.

ಮೈಕ್ ಟೈಸನ್ ಮತ್ತು ಜೇಕ್ ಪಾಲ್ ನಡುವೆ ಒಟ್ಟು 8 ಸುತ್ತಿನ ಸ್ಫರ್ಧೆ ನಡೆಯಿತು. ಪೌಲ್ ಆರು ಸುತ್ತುಗಳಲ್ಲಿ ಗೆಲುವು ಸಾಧಿಸಿದರೇ, ಮೈಕ್ ಟೈಸನ್ ಕೇವಲ ಎರಡು ಸುತ್ತುಗಳಲ್ಲಿ ಗೆದ್ದು ತೃಪ್ತಿಪಟ್ಟುಕೊಂಡರು. ಇದರೊಂದಿಗೆ ಪೌಲ್ 10-9, 10-9, 9-10, 9-10, 9-10, 9-10, 9-10, 9-10 ಅಂಕಗಳಿಂದ ಜಯಭೇರಿ ಬಾರಿಸಿದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿಲು ಜೇಕ್​ ಪೌಲ್ ಬರೋಬ್ಬರಿ 40 ಮಿಲಿಯನ್​ ಡಾಲರ್​ (ರೂ.337 ಕೋಟಿ) ಪಡೆದುಕೊಂಡಿದ್ದು, ಟೈಸನ್ ರೂ.168 ಕೋಟಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ ‌Suryakumar Yadav: ನೆಟ್ಟಿಗರ ಮನಗೆದ್ದ ಸೂರ್ಯಕುಮಾರ್‌; ವಿಡಿಯೊ ವೈರಲ್

ಸೋಲು ಕಂಡ ಟೈಸನ್‌ಗೆ, ಇದು ನಿಮ್ಮ ಕೊನೆಯ ಪಂದ್ಯವೇ? ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಟೈಸನ್‌, ʼನಾನು ಹಾಗೆ ಯೋಚಿಸುವುದಿಲ್ಲ! ಬಹುಶಃ ನಾನು ಅವನ ಸಹೋದರನೊಂದಿಗೆ ಹೋರಾಡುತ್ತೇನೆʼ ಎಂದು ಹೇಳಿದರು.

1987ರಿಂದ 1990ರವರೆಗೆ ಟೈಸನ್‌ ಅವರು ಹೆವಿವೇಟ್‌ ವಿಶ್ವಚಾಂಪಿಯನ್‌ ಪಟ್ಟ ಅಲಂಕರಿಸಿದ್ದರು.ಅತಿ ಕಿರಿಯ ವಯಸ್ಸಿನಲ್ಲಿ (20 ವರ್ಷ, ನಾಲ್ಕು ತಿಂಗಳು, 22 ದಿನಗಳು) ಹೆವಿವೇಟ್‌ ಟ್ರೋಫಿ ಗೆದ್ದ ದಾಖಲೆಯೂ ಅವರ ಹೆಸರಲ್ಲಿದೆ. ಖ್ಯಾತಿಯೊಂದಿಗೆ ಸಾಕಷ್ಟು ವಿವಾದಗಳೂ ಅವರ ಬೆನ್ನಿಗಂಟಿಕೊಂಡಿವೆ. 1992ರಲ್ಲಿ ಅತ್ಯಾಚಾರ ಪ್ರಕರಣವೊಂದರಲ್ಲಿ ಟೈಸನ್‌ ಆರು ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದರು. ಮೂರು ವರ್ಷಗಳ ನಂತರ ಪೆರೋಲ್‌ ಮೇಲೆ ಬಿಡುಗಡೆಯಾಗಿದ್ದರು. ‘ಭೂಮಿ ಮೇಲಿನ ಅತ್ಯಂತ ಕ್ರೂರ ಮನುಷ್ಯ’ (ದ ಬ್ಯಾಡೆಸ್ಟ್ ಮ್ಯಾನ್ ಆನ್‌ ದ ಪ್ಲಾನೆಟ್‌) ಎಂಬ ಹೆಸರಿನ ಕುಖ್ಯಾತಿಯೂ ಅವರಿಗಿದೆ.