Wednesday, 6th November 2024

James Anderson: 17 ವರ್ಷಗಳ ಬಳಿಕ ಐಪಿಎಲ್ ಹರಾಜಿಗೆ ಜೇಮ್ಸ್​ ಆ್ಯಂಡರ್ಸನ್

ಲಂಡನ್‌: ಇಂಗ್ಲೆಂಡ್‌ ತಂಡದ ಮಾಜಿ ವೇಗಿ, 42 ವರ್ಷದ ಜೇಮ್ಸ್​ ಆ್ಯಂಡರ್ಸನ್(James Anderson) ಇದೇ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ(IPL 2025) ಆಡುವ ಇರಾದೆಯಲ್ಲಿದ್ದಾರೆ. ಹೌದು, ಇದುವರೆಗಿನ 17 ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಒಮ್ಮೆಯೂ ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿರದ ಆ್ಯಂಡರ್ಸನ್ ಬರೋಬ್ಬರಿ 17 ವರ್ಷಗಳ ಬಳಿಕ ಐಪಿಎಲ್ ಹರಾಜಿಗಾಗಿ 1.5 ಕೋಟಿ ರೂ. ಮೂಲಬೆಲೆಯೊಂದಿಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆ್ಯಂಡರ್ಸನ್ ಕೊನೆಯ ಬಾರಿಗೆ ಟಿ20 ಕ್ರಿಕೆಟ್‌ ಆಡಿದ್ದು 2014ರಲ್ಲಿ ಇದಾದ ಬಳಿಕ ಯಾವುದೇ ಮಾದರಿಯ ಟಿ20 ಕ್ರಿಕೆಟ್‌ ಲೀಗ್‌ ಆಡಿಲ್ಲ.

ದಿ ಹಂಡ್ರೆಡ್ ಲೀಗ್ ವೇಳೆ, ನಾನು 20 ಓವರ್‌ ಕ್ರಿಕೆಟ್‌ ಆಡಲು ಸಿದ್ಧ ಎಂದು ಹೇಳುವ ಮೂಲಕ ಆ್ಯಂಡರ್ಸನ್ ಫ್ರಾಂಚೈಸಿ ಕ್ರಿಕೆಟ್‌ ಆಡುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ ಅವರು ಐಪಿಎಲ್‌ ಆಡಲು ನಿರ್ಧರಿಸಿದ್ದಾರೆ. ಆ್ಯಂಡರ್ಸನ್ ಹರಾಜಿಗೆ ಹೆಸರು ನೋಂದಾಯಿಸಿದ್ದೇ ತಡ ಅಭಿಮಾನಿಗಳೂ ಅವರು ಯಾವ ತಂಡದ ಪರ ಆಡಲಿದ್ದಾರೆ ಎಂಬ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ. ಕೆಲವರು ಚೆನ್ನೈ ಸೂಪರ್‌ ಕಿಂಗ್ಸ್‌, ಇನ್ನು ಕೆಲವರು ಆರ್‌ಸಿಬಿ ಸೇರಲಿದ್ದಾರೆ ಎಂದು ಭವಿಷ್ಯ ನುಡಿಯಲಾರಂಭಿಸಿದ್ದಾರೆ. ಇಂಗ್ಲೆಂಡ್‌ ತಂಡದ ಸ್ಟಾರ್‌ ಆಟಗಾರ ಬೆನ್‌ ಸ್ಟೋಕ್ಸ್‌ ಈ ಬಾರಿ ಐಪಿಎಲ್‌ ಆಡದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕೆಲ ಮೂಲಗಳ ಪ್ರಕಾರ ಅವರು ಹರಾಜಿಗೆ ತಮ್ಮ ಹೆಸರು ನೋಂದಾಣಿ ಮಾಡಿಲ್ಲ ಎನ್ನಲಾಗಿದೆ.

ಇದನ್ನು ಓದಿ James Anderson: 42ನೇ ವಯಸ್ಸಿನಲ್ಲಿ ಐಪಿಎಲ್‌ ಆಡಲು ಮುಂದಾದ ಇಂಗ್ಲೆಂಡ್‌ ವೇಗಿ

ಮೆಗಾ ಹರಾಜಿಗೆ ಒಟ್ಟು 1,574 ಕ್ರಿಕೆಟಿಗರು (ಭಾರತದ 1,165 ಮತ್ತು ವಿದೇಶದ 409 ಆಟಗಾರರು) ಮೆಗಾ ಆಕ್ಷನ್‌ಗೆ ಸಾಕ್ಷಿಯಾಗಲಿದ್ದಾರೆ. 320 ಕ್ಯಾಪ್ಡ್ ಪ್ಲೇಯರ್, 1,224 ಅನ್‌ಕ್ಯಾಪ್ಡ್ ಆಟಗಾರರು, ಅಸೋಸಿಯೇಟ್‌ ದೇಶಗಳ 30 ಕ್ರಿಕೆಟಿಗರು ಇದರಲ್ಲಿ ಸೇರಿದ್ದಾರೆ. ಜೆಡ್ಡಾದ ‘ಅಬಾದಿ ಅಲ್‌ ಜೋಹರ್‌ ಅರೆನಾ’ದಲ್ಲಿ ಹರಾಜು ನಡೆಯಲಿದೆ. ಎಲ್ಲ 10 ಫ್ರಾಂಚೈಸಿಗಳು ಗರಿಷ್ಠ 25 ಆಟಗಾರರನ್ನು ಹೊಂದಬಹುದಾಗಿದ್ದು, ಹರಾಜಿನಲ್ಲಿ 70 ವಿದೇಶೀಯರ ಸಹಿತ ಗರಿಷ್ಠ 204 ಆಟಗಾರರು ಬಿಕರಿಯಾಗಲಿದ್ದಾರೆ.

ಭಾರತ ಹೊರತಾಗಿ ದಕ್ಷಿಣ ಆಫ್ರಿಕಾದಿಂದ ಗರಿಷ್ಠ 91 ಆಟಗಾರರು ಹರಾಜಿಗೆ ಹೆಸರು ನೋಂದಾಯಿಸಿದ್ದಾರೆ. ನಂತರ ಕ್ರಮವಾಗಿ ಆಸ್ಟ್ರೇಲಿಯಾ (76), ಇಂಗ್ಲೆಂಡ್ (52), ನ್ಯೂಜಿಲೆಂಡ್ (39), ವೆಸ್ಟ್ ಇಂಡೀಸ್ (33), ಶ್ರೀಲಂಕಾ (29),ಅಫಘಾನಿಸ್ತಾನ (29), ಬಾಂಗ್ಲಾದೇಶ (13), ಅಮೆರಿಕ (10), ಐರ್ಲೆಂಡ್ (9), ಜಿಂಬಾಬ್ವೆ (8), ಕೆನಡಾ (4), ಸ್ಕಾಟ್ಲೆಂಡ್ (2) ಹಾಗೂ ಇಟಲಿ, ಯುಎಇಯ ತಲಾ ಒಬ್ಬರು ಹರಾಜಿಗೆ ಹೆಸರು ನೀಡಿದ್ದಾರೆ.

ಇದೇ ಜುಲೈನಲ್ಲಿ ನಡೆದಿದ್ದ ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಪಂದ್ಯವನ್ನಾಡುವ ಮೂಲಕ ಆ್ಯಂಡರ್ಸನ್ತಮ್ಮ 22 ವರ್ಷಗಳ ಸುದೀರ್ಘ ಅಂತಾರಾಷ್ಟೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ತೆರೆ ಎಳೆದಿದ್ದರು. ಆ್ಯಂಡರ್ಸನ್​ ಇಂಗ್ಲೆಂಡ್‌ ಪರ ಅತಿ ಹೆಚ್ಚು ವಿಕೆಟ್‌ ಪಡೆದ, ಟೆಸ್ಟ್ ಕ್ರಿಕೆಟ್‌ನಲ್ಲಿ 700ಕ್ಕೂ ಅಧಿಕ ವಿಕೆಟ್‌ ಪಡೆದ ವಿಶ್ವದ ಮೊದಲ ವೇಗಿ ಹಾಗೂ ಒಟ್ಟಾರೆ ಮೂರನೇ ಬೌಲರ್‌ ಎನಿಸಿಕೊಂಡಿದ್ದಾರೆ.

2003ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆ್ಯಂಡರ್ಸನ್‌, ಈವರೆಗೂ 188 ಪಂದ್ಯಗಳಲ್ಲಿ 704 ವಿಕೆಟ್‌ ಗಳಿಸಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಹಾಗೂ ಆಸ್ಟ್ರೇಲಿಯಾದ ಶೇನ್‌ ವಾರ್ನ್‌ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಸ್ಥಾನದಲ್ಲಿ ಆ್ಯಂಡರ್ಸನ್‌ ಇದ್ದಾರೆ. 194 ಏಕದಿನ ಪಂದ್ಯಗಳನ್ನು ಆಡಿರುವ ಅವರು, 269 ವಿಕೆಟ್‌ಗಳನ್ನು ಪಡೆದಿದ್ದಾರೆ.