Monday, 16th December 2024

AUS vs IND: ಬುಮ್ರಾಗೆ ಜನಾಂಗೀಯ ನಿಂದನೆ ಮಾಡಿದ ಇಂಗ್ಲೆಂಡ್‌ ಮಾಜಿ ಆಟಗಾರ್ತಿ

ಬ್ರಿಸ್ಬೇನ್: ಟೀಮ್‌ ಇಂಡಿಯಾದ(AUS vs IND) ವೇಗಿ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಅವರನ್ನು ಇಂಗ್ಲೆಂಡ್​ ಮಾಜಿ ಮಹಿಳಾ ಕ್ರಿಕೆಟರ್​ ಹಾಗೂ ವೀಕ್ಷಕ ವಿವರಣೆಗಾರ್ತಿ ಇಶಾ ಗುಹಾ(isa guha) ಜನಾಂಗೀಯ ನಿಂದನೆ ಮಾಡಿ ಇದೀಗ ವಿವಾದಕ್ಕೆ ಸಿಲುಕಿದ್ದಾರೆ. ಈ ಘಟನೆ 2008ರ ಮಂಕಿಗೇಟ್ ವಿವಾದವನ್ನು ನೆನಪಿಸಿದೆ.

ಭಾನುವಾರದ ದ್ವಿತೀಯ ದಿನದಾಟದ ವೇಳೆ ಜಸ್‌ಪ್ರೀತ್‌ ಬುಮ್ರಾ ಆಸೀಸ್‌ ವಿಕೆಟ್‌ ಬೇಟೆಯಾಡುತ್ತಿರುವ ವೇಳೆ ಅವರ ಬಗ್ಗೆ ಮೆಚ್ಚುಗೆ ಸೂಚಿಸುವ ಭರದಲ್ಲಿ ಇಶಾ ಪ್ರೈಮೇಟ್ (ವಾನರ, ಸಸ್ತನಿ ಪ್ರಾಣಿ) ಎಂದು ಕರೆದರು. ಇದು ವಿವಾದಕದ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಇಶಾ ವಿರುದ್ಧ ಜನಾಂಗೀಯ ನಿಂದನೆಯ ಆರೋಪಗಳನ್ನು ಮಾಡಿದ್ದಾರೆ.

ಬುಮ್ರಾ ಬೆಳಗ್ಗೆ 5 ಓವರ್​ಗಳಲ್ಲಿ 4 ರನ್​ಗಳಿಗೆ 2 ವಿಕೆಟ್​ ಕಬಳಿಸಿದ ಬಗ್ಗೆ ಫಾಕ್ಸ್​ ಸ್ಪೋರ್ಟ್ಸ್ ಚಾನಲ್​ನ ಕಾಮೆಂಟರಿ ಬಾಕ್ಸ್​ನಲ್ಲಿದ್ದ ಮಾಜಿ ವೇಗಿ ಬ್ರೆಟ್​ ಲೀ, ಇಶಾ ಅವರ ಬಳಿ ಬುಮ್ರಾ ಬೌಲಿಂಗ್‌ ಬಗ್ಗೆ ಅಭಿಪ್ರಾಯ ಕೇಳಿದರು. ಆಗ ಇಶಾ, ಬುಮ್ರಾ ಅವರೊಬ್ಬ ಅತ್ಯಂತ ಅಮೂಲ್ಯವಾದ ʼಫ್ರೈಮೇಟ್​’ ಎಂದರು.

ಕ್ಷಮೆ ಕೇಳಿದ ಇಶಾ

ಘಟನೆ ಬಗ್ಗೆ ಇಶಾ ಅವರು ಕ್ಷಮೆ ಕೇಳಿದ್ದಾರೆ. “ನಾನು ಬಳಿಸಿದ ಪದದ ಬಗ್ಗೆ ಕ್ಷಮೆ ಕೇಳುತ್ತೇನೆ. ಇತರರ ಬಗ್ಗೆ ಸಹಾನುಭೂತಿ ಮತ್ತು ಗೌರವದ ವಿಷಯದಲ್ಲಿ ನಾನು ನಿಜವಾಗಿಯೂ ಉನ್ನತ ಗುಣಮಟ್ಟವನ್ನು ಹೊಂದಿದ್ದೇನೆ. ಬುಮ್ರಾರನ್ನು ನಿಂದಿಸುವ ನಿಟ್ಟಿನಲ್ಲಿ ಈ ಪದವನ್ನು ಬಳಸಿಲ್ಲ. ಬಾಯಿ ತಪ್ಪಿನಿಂದ ಈ ಪದ ಬಳಸಿ ಹೋಯಿತು. ಕ್ಷಮೆ ಇರಲಿʼ ಎಂದರು.

ಕಪಿಲ್‌ ದಾಖಲೆ ಮುರಿದ ಬುಮ್ರಾ

ಜಸ್‌ಪ್ರೀತ್‌ ಬುಮ್ರಾ 72 ರನ್‌ ವೆಚ್ಚದಲ್ಲಿ 5 ವಿಕೆಟ್‌ ಕಿತ್ತು ಮಿಂಚಿದರು. ಈ ವೇಳೆ ಅವರು ಮಾಜಿ ಆಟಗಾರ ಕಪಿಲ್‌ ದೇವ್‌ ಅವರ ದಾಖಲೆಯೊಂದನ್ನು ಮುರಿದರು. ವಿದೇಶಿ ನೆಲದಲ್ಲಿ ಆಡಿದ್ದ ಟೆಸ್ಟ್‌ ಪಂದ್ಯದಲ್ಲಿ ಅತ್ಯಧಿಕ ಬಾರಿ 5 ವಿಕೆಟ್ ಕಬಳಿಸಿದ ಭಾರತದ ವೇಗಿ ಎಂಬ ದಾಖಲೆಯನ್ನು ಬರೆದರು. ಇದಕ್ಕೂ ಮುನ್ನ ಈ ದಾಖಲೆ ಕಪಿಲ್ ದೇವ್ ಹೆಸರಿನಲ್ಲಿತ್ತು. ಕಪಿಲ್ ದೇವ್​ 10 ಬಾರಿ 5 ವಿಕೆಟ್​ಗಳ ಗೊಂಚಲು ಪಡೆದಿದ್ದರು. ಇದೀಗ ಬುಮ್ರಾ 11ನೇ ಬಾರಿ 5 ವಿಕೆಟ್ ಕಬಳಿಸುವ ಮೂಲಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಇದು ಮಾತ್ರವಲ್ಲದೆ ಸೇನಾ (ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯಾ) ದೇಶಗಳಲ್ಲಿ ಅತ್ಯಧಿಕ ಬಾರಿ 5 ವಿಕೆಟ್ ಕಬಳಿಸಿದ ಭಾರತೀಯ ಬೌಲರ್​ ಎಂಬ ದಾಖಲೆ ಕೂಡ ಬುಮ್ರಾ ಪಾಲಾಗಿದೆ. ಒಟ್ಟು 8 ಬಾರಿ 5 ವಿಕೆಟ್ ಕಬಳಿಸಿದ್ದಾರೆ.