Friday, 22nd November 2024

ಜೋ ರೂಟ್ ಭರ್ಜರಿ ಬ್ಯಾಟಿಂಗ್: ಭಾರೀ ಹಿನ್ನಡೆಯಿಂದ ಭಾರತ ಕಂಗಾಲು

ಲೀಡ್ಸ್: ಸತತ 3ನೇ ಟೆಸ್ಟ್‌ನಲ್ಲೂ ಶತಕ ಸಿಡಿಸಿದ ನಾಯಕ ಜೋ ರೂಟ್ (121 ರನ್) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಇಂಗ್ಲೆಂಡ್ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವಿರುದ್ದ ಬಿಗಿ ಹಿಡಿತ ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಭಾರಿ ಹಿನ್ನಡೆ ಅನುಭವಿಸಿರುವ ಭಾರತ, ಪಂದ್ಯ ರಕ್ಷಿಸಿಕೊಳ್ಳಲು ಉಳಿದ 3 ದಿನದಾಟದಲ್ಲಿ ಹರಸಾಹಸ ನಡೆಸಬೇಕಾಗಿದೆ.

ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 120 ರನ್‌ಗಳಿಂದ ಎರಡನೇ ದಿನ ದಾಟ ಆರಂಭಿಸಿದ ಇಂಗ್ಲೆಂಡ್ ತಂಡ ದಿನದಂತ್ಯಕ್ಕೆ 129 ಓವರ್‌ಗಳಲ್ಲಿ 8 ವಿಕೆಟ್‌ಗೆ 423 ರನ್ ಪೇರಿಸಿದ್ದು, 345 ಮುನ್ನಡೆ ಸಾಧಿಸಿದೆ. ಭಾರತ ಮೊದಲ ದಿನದಾಟದಲ್ಲಿ ಕೇವಲ 78 ರನ್‌ಗೆ ಆಲೌಟ್ ಆಗಿತ್ತು.

ದಿನದಾಟ ಆರಂಭಿಸಿದ ರೋರಿ ಬನ್ಸ್ ಹಾಗೂ ಹಸೀಬ್ ಹಮೀದ್ ಜೋಡಿಗೆ ಮೊಹಮದ್ ಶಮಿ ದಿನದಾಟ ರಂಭದಲ್ಲೇ ಬ್ರೇಕ್ ಹಾಕಿದರು. ಮೊದಲ ದಿನದಾಟದ 120 ರನ್ ಜತೆಯಾಟಕ್ಕೆ ಈ ಜೋಡಿ ಮತ್ತೆ 15 ರನ್ ಸೇರಿಸಿ ಬೇರ್ಪಟ್ಟಿತು. ರೋರಿ ಬನ್ಸ್ ಅವರನ್ನು ಬೌಲ್ಡ್ ಮಾಡಿದ ಶಮಿ ಕೊಂಚ ನೆಮ್ಮದಿ ತಂದರು.

ಕೆಲಹೊತ್ತಿನಲ್ಲೇ ಹಮೀದ್ (68) ಕೂಡ ಜಡೇಜಾ ಎಸೆತದಲ್ಲಿ ಬೌಲ್ಡ್ ಆದರು. ಬಳಿಕ ಜತೆಯಾದ ಡೇವಿಡ್ ಮಲಾನ್ (70 ರನ್, 128 ಎಸೆತ, 11 ಬೌಂಡರಿ) ಹಾಗೂ ಜೋ ರೂಟ್ ಜೋಡಿ ಭಾರತದ ಬೌಲರ್‌ಗಳಿಗೆ ಇನ್ನಿಲ್ಲದಂತೆ ಕಾಡಿತು.

ಮೂರು ವರ್ಷಗಳ ಬಳಿಕ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಮಲಾನ್ ಅರ್ಧಶತಕ ಸಿಡಿಸಿ ಮಿಂಚಿದರು. ಮಲಾನ್-ರೂಟ್ ಜೋಡಿ 3ನೇ ವಿಕೆಟ್‌ಗೆ 139 ರನ್ ಕಲೆಹಾಕಿತು. ಮಲಾನ್ ವಿಕೆಟ್ ಕಬಳಿಸುವ ಮೂಲಕ ಸಿರಾಜ್ ಈ ಜೋಡಿಯನ್ನು ಬೇರ್ಪಡಿಸಿದರು.