ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಆರಂಭಿಕ ಆಘಾತ ಅನುಭವಿಸಿತು. 35 ರನ್ಗೆ 3 ವಿಕೆಟ್ ಕಳೆದುಕೊಂಡಿತು. ಆದರೆ, ಜೋಸ್ ಬಟ್ಲರ್ ದೃತಿಗೆಡಲಿಲ್ಲ. ನಾಯಕ ಇಯಾನ್ ಮಾರ್ಗನ್ 4ನೇ ವಿಕೆಟ್ಗೆ 112 ರನ್ ಜೊತೆಯಾಟ ಆಡಿದರು. ಜೋಸ್ ಬಟ್ಲರ್ ಕೇವಲ 67 ಬಾಲ್ನಲ್ಲಿ ಅವರು 101 ರನ್ ಗಳಿಸಿ ಕೊನೆಯವರೆಗೂ ಉಳಿದರು. ಇವರ ಅಮೋಘ ಬ್ಯಾಟಿಂಗ್ನಿಂದಾಗಿ ಇಂಗ್ಲೆಂಡ್ 163 ರನ್ ಗಳಿಸಲು ಶಕ್ಯವಾಯಿತು.
ಜೋಸ್ ಬಟ್ಲರ್ ಅವರದ್ದು ಇದು ಚೊಚ್ಚಲ ಟಿ20 ಶತಕವಾಗಿದೆ. ಈ ಟಿ20 ವಿಶ್ವಕಪ್ನಲ್ಲಿ ಬಂದ ಮೊದಲ ಶತಕವೂ ಇದಾಗಿದೆ.
ಇಂಗ್ಲೆಂಡ್ನಂತೆ ಚೇತರಿಸಿಕೊಳ್ಳದ ಲಂಕನ್ನರು 11ನೇ ಓವರ್ವರೆಗೂ ವಿಕೆಟ್ ಕಳೆದುಕೊಳ್ಳುತ್ತಾ ಹೋದರು. 76 ರನ್ಗೆ 5 ವಿಕೆಟ್ ಕಳೆದುಕೊಂಡ ಶ್ರೀಲಂಕಾ ಸೋಲಿನ ಸುಳಿಗೆ ಸಿಲುಕಿತು. ಆದರೆ, ನಾಯಕ ದಾಸುನ್ ಶಾನಕ ಮತ್ತು ವನಿಂದು ಹಸರಂಗ ಲಂಕಾ ಇನ್ನಿಂಗ್ಸ್ಗೆ ಚೇತರಿಕೆ ನೀಡಿದರು.
ಹಸರಂಗ ಮತ್ತು ಶಾನಕ ಅವರು 6ನೇ ವಿಕೆಟ್ಗೆ 53 ರನ್ ಜೊತೆಯಾಟ ನೀಡಿದರು. ಬೌಂಡರಿ ಗೆರೆಯಲ್ಲಿ ಇಂಗ್ಲೆಂಡ್ ಫೀಲ್ಡರ್ಗಳು ಅದ್ಭುತವಾಗಿ ಹಿಡಿದ ಕ್ಯಾಚ್ಗೆ ಹಸರಂಗ ಬಲಿಯಾದರು. ಅಲ್ಲಿಂದ ಇಂಗ್ಲೆಂಡ್ ಕಡೆಗೆ ಪಂದ್ಯ ಮತ್ತೆ ವಾಲಿತು. ನಾಯಕ ಶಾನಕ ದುರದೃಷ್ಟಕರ ರೀತಿಯಲ್ಲಿ ರನ್ ಔಟ್ ಆದರು. ಇಂಗ್ಲೆಂಡ್ ಈ ಗೆಲುವಿನೊಂದಿಗೆ 4 ಪಂದ್ಯಗಳಿಂದ 8 ಅಂಕ ಗಳಿಸಿ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದೆ. ಶ್ರೀಲಂಕಾ ತಂಡದ ಸೆಮಿಫೈನಲ್ ಆಸೆ ಬಹುತೇಕ ಕಮರಿ ದಂತಾಗಿದೆ.
ಶ್ರೀಲಂಕಾ ತನ್ನ ಮುಂದಿನ ಪಂದ್ಯವನ್ನು ಅಬುಧಾಬಿಯಲ್ಲಿ ನ.4ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ನ.6ರಂದು ಸೌತ್ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಆಡಲಿದೆ.
ಸ್ಕೋರು ವಿವರ:
ಇಂಗ್ಲೆಂಡ್ 20 ಓವರ್ 163/4
(ಜೋಸ್ ಬಟ್ಲರ್ ಅಜೇಯ 101, ಇಯಾನ್ ಮಾರ್ಗನ್ 40 ರನ್- ವನಿಂದು ಹಸರಂಗ 21/3)
ಶ್ರೀಲಂಕಾ 19 ಓವರ್ 137/10
(ಚರಿತ್ ಅಸಲಂಕಾ 21, ಭನುಕ ರಾಜಪಕ್ಸ 26, ವನಿಂದು ಹಸರಂಗ 34, ದಾಸುನ್ ಶಾನಕ 26 ರನ್- ಅದಿಲ್ ರಶೀದ್ 19/2)