ನವದೆಹಲಿ: ಲಖನೌ ಫ್ರಾಂಚೈಸಿಯ ಸಂಪರ್ಕಕ್ಕೆ ಬರುವ ಮೂಲಕ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ರಷೀದ್ ಖಾನ್ ಅವರು ಈ ಬಾರಿಯ ಇಂಡಿಯನ್ ಪ್ರೀಮಿಯರ್ನಲ್ಲಿ ನಿಷೇಧಕ್ಕೊಳಗಾಗುವ ಭೀತಿಯಲ್ಲಿದ್ದಾರೆ.
ಇವರುಗಳು ರಿಟೆಂಶನ್ ಲಿಸ್ಟ್ ಅನ್ನು ಸಲ್ಲಿಸುವ ಮುನ್ನವೇ ಬೇರೊಂದು ಐಪಿಎಲ್ ತಂಡವನ್ನ ಸಂಪರ್ಕಿಸಿ ಮಾತುಕತೆ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ ಹೈದಬಾರಾದ್ ತಂಡಗಳು ಈ ಬಗ್ಗೆ ಬಿಸಿಸಿಐಗೆ ದೂರು ಕೊಟ್ಟಿರುವುದು ತಿಳಿದುಬಂದಿದೆ. ಒಂದು ವೇಳೆ, ಆರೋಪ ನಿಜವಾದಲ್ಲಿ ಕೆಎಲ್ ರಾಹುಲ್ ಮತ್ತು ರಷೀದ್ ಖಾನ್ಗೆ ಒಂದು ವರ್ಷ ಬ್ಯಾನ್ ಹೇರುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ ರವೀಂದ್ರ ಜಡೇಜಾ ಕೂಡ ಇದೇ ರೀತಿಯ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು.
ಲಕ್ನೋ ಮತ್ತು ಅಹ್ಮದಾಬಾದ್ ಐಪಿಎಲ್-2022 ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎರಡು ಹೊಸ ತಂಡಗಳಾ ಗಿವೆ. ಈ ಪೈಕಿ ಲಕ್ನೋ ಫ್ರಾಂಚೈಸಿಯವರು ಕೆಎಲ್ ರಾಹುಲ್ ಮತ್ತು ರಷೀದ್ ಖಾನ್ ಅವರನ್ನ ಸಂಪರ್ಕಿಸಿ ಅಧಿಕ ಹಣದ ಆಫರ್ ಕೊಟ್ಟು ಸೆಳೆಯುವ ಪ್ರಯತ್ನ ಮಾಡಿದ್ಧಾರೆ ಎಂದು ವರದಿಯಾಗಿತ್ತು.ಎಂಟು ತಂಡಗಳು ತಾವು ಉಳಿಸಿಕೊಳ್ಳುವ ಗರಿಷ್ಠ ನಾಲ್ವರು ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಕೊಡಲು ಇಂದು ಕೊನೆಯ ದಿನವಾಗಿದೆ. ರಿಟೆನ್ಷನ್ ಪಟ್ಟಿ ಪ್ರಕಟವಾಗುವವರೆಗೂ ಯಾವ ತಂಡವೂ ಬೇರೆ ತಂಡದ ಆಟಗಾರರನ್ನ ಸಂಪರ್ಕಿಸುವಂತಿಲ್ಲ.
ಕೆಎಲ್ ರಾಹುಲ್ ಮತ್ತು ರಷೀದ್ ಖಾನ್ ಅವರನ್ನ ಒಂದು ವರ್ಷ ನಿಷೇಧ ಮಾಡಬಹುದು. ಅತ್ತ, ಲಕ್ನೋ ತಂಡ ತನ್ನ ಚೊಚ್ಚಲ ಟೂರ್ನಿಯಲ್ಲೇ ಪೆಟ್ಟು ತಿನ್ನುವ ಸಾಧ್ಯತೆ ಇದೆ. ಹನ್ನೊಂದು ವರ್ಷಗಳ ಹಿಂದೆ 2010ರಲ್ಲಿ ರವೀಂದ್ರ ಜಡೇಜಾ ಅವರು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದರು. ಆಗ ಮುಂಬೈ ಇಂಡಿಯನ್ಸ್ ತಂಡ ಸಂಪರ್ಕಿಸಿ ಅನಧಿಕೃತ ಮಾರ್ಗದಲ್ಲಿ ಖರೀದಿ ಮಾಡಲು ಹೊರಟಿತ್ತು. ಆಗ ಜಡೇಜಾ ಅವರನ್ನ ಒಂದು ವರ್ಷ ನಿಷೇಧ ಮಾಡಲಾಗಿತ್ತು.