Wednesday, 4th December 2024

Kabaddi Federation: ಜಾಗತಿಕ ಕೂಟಗಳಲ್ಲಿ ಭಾರತ ಕಬಡ್ಡಿ ತಂಡದ ಸ್ಪರ್ಧೆಗೆ ತಡೆ; ಕಾರಣವೇನು?

Kabaddi Federation

ನವದೆಹಲಿ: ಭಾರತೀಯ ಅಮೆಚೂರ್‌ ಕಬಡ್ಡಿ ಸಂಸ್ಥೆ(ಎಕೆಎಫ್‌ಐ)ಯನ್ನು(Kabaddi Federation) ಅಂತಾರಾಷ್ಟ್ರೀಯ ಕಬಡ್ಡಿ ಒಕ್ಕೂಟ ಅಮಾನತುಗೊಳಿಸಿದೆ. ಆಡಳಿತದ ಗೊಂದಲ ಮುಂದುವರಿದಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅಮಾನತು ಶಿಕ್ಷೆಯಿಂದ ಭಾರತ ತಂಡ ಜಾಗತಿಕ ಕೂಟಗಳಲ್ಲಿ ಸ್ಪರ್ಧೆಸಲು ಸಾಧ್ಯವಿಲ್ಲ.

ಚೊಚ್ಚಲ ಆವೃತ್ತಿಯ ಬೀಚ್‌ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಕಣಕ್ಕಿಳಿಯಲು ಎದುರು ನೋಡುತ್ತಿದ್ದ ಭಾರತೀಯ ಕಬಡ್ಡಿ ತಂಡಕ್ಕೆ ಈಗ ಹಿನ್ನಡೆಯಾಗಿದೆ. ನಿಷೇಧ ಇರುವ ಕಾರಣ ಈ ಟೂರ್ನಿಯಲ್ಲಿ ಭಾರತದ ತಂಡಗಳು ಪಾಲ್ಗೊಳ್ಳುವುದಿಲ್ಲ.

ಕಳೆದ 5 ವರ್ಷಗಳಿಂದ ಚುನಾಯಿತ ಸಮಿತಿಯಿಲ್ಲ. ನಿಯಮ ಉಲ್ಲಂಘಣೆ ಕಾರಣಕ್ಕೆ ಎಕೆಎಫ್‌ಐನ ಅಮಾನತುಗೊಳಿಸಿದ್ದ ದೆಹಲಿ ಹೈಕೋರ್ಟ್‌, ನ್ಯಾ. ಎಸ್‌.ಪಿ. ಗರ್ಗ್‌ ಅವರನ್ನು 2019ರಲ್ಲಿ ಆಡಳಿತಾಧಿಕಾರಿಯಾಗಿ ನೇಮಿಸಿತ್ತು. 2023ರ ಡಿಸೆಂಬರ್‌ನಲ್ಲಿ ಎಕೆಎಫ್‌ಐಗೆ ಚುನಾವಣೆ ನಡೆದಿತ್ತಾದರೂ ನಿಯಮ ಪಾಲಿಸಿಲ್ಲ ಎಂದು ದೆಹಲಿ ಹೈಕೋರ್ಟ್‌ ಚುನಾವಣೆಯನ್ನು ಅಸಿಂಧುಗೊಳಿಸಿತ್ತು.

ಇದನ್ನೂ ಓದಿ IND vs BAN: ಬುಮ್ರಾ ಯಾರ್ಕರ್‌ ದಾಳಿಗೆ ಕಂಪಿಸಿದ ಬಾಂಗ್ಲಾ; ಭಾರತಕ್ಕೆ 308 ರನ್‌ ಲೀಡ್‌

ಚೀನಾ ಓಪನ್‌ನಲ್ಲಿ ಮಾಳವಿಕಾಗೆ ಸೋಲು

ಚಾಂಗ್‌ಝೌ (ಚೀನಾ): ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಯುವ ಆಟಗಾರ್ತಿ ಮಾಳವಿಕಾ ಬನ್ಸೋಡ್‌ ಅವರು ಎರಡು ಬಾರಿಯ ವಿಶ್ವ ಚಾಂಪಿಯನ್ ಅಕಾನೆ ಯಮಗುಚಿ ವಿರುದ್ಧ ಸೋತು ತನ್ನ ಅಭಿಯಾನ ಮುಗಿಸಿದ್ದಾರೆ. ಶುಕ್ರವಾರ ನಡೆದ ಈ ಪಂದ್ಯದಲ್ಲಿ43ನೇ ಕ್ರಮಾಂಕದ ಮಾಳವಿಕಾ 10-21, 21-16 ರಿಂದ ವಿಶ್ವ ಐದನೇ ಕ್ರಮಾಂಕದ ಆಟಗಾರ್ತಿಯೆದುರು ನೇರ ಗೇಮ್‌ಗಳ ಸೋಲನುಭವಿಸಿದರು. ಈ ಪಂದ್ಯ 35 ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ಇದು ಮಾಳವಿಕಾಗೆ ಯಮಗುಚಿ ವಿರುದ್ಧ ಎದುರಾದ ಮೂರನೇ ಸೋಲು.

ಚೆಸ್‌ ಒಲಿಂಪಿಯಾಡ್‌: ಬಂಗಾರದ ಸನಿಹ ಭಾರತ

ಬುಡಾಪೆಸ್ಟ್‌: ಭಾರತದ ಪುರುಷರ ತಂಡ 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಮೊದಲ ಬಾರಿ ಚಿನ್ನದ ಪದಕ ಗೆಲ್ಲುವ ಹಾದಿಯಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ. ಗುರುವಾರ ಎಂಟನೇ ಸುತ್ತಿನಲ್ಲಿ ಇರಾನ್ ತಂಡವನ್ನು 3.5-0.5 ರಿಂದ ಸುಲಭವಾಗಿ ಸೋಲಿಸಿ ಓಪನ್ ವಿಭಾಗದಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ.

ಆದರೆ, ಮಹಿಳೆಯರ ವಿಭಾಗದ ಎಂಟನೇ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಭಾರತ, ಪೊಲೆಂಡ್ ಎದುರು 1.5-2.5 ಅಂತರದಲ್ಲಿ ಆಘಾತ ಅನುಭವಿಸಿತು. ಇದು ಭಾರತ ವನಿತೆಯರಿಗೆ ಎದುರಾದ ಮೊದಲ ಸೋಲು. ಪುರುಷರ ವಿಭಾಗದಲ್ಲಿ ಭಾರತ ಸಂಭವನೀಯ 16 ಪಾಯಿಂಟ್ಸ್‌ ಕಲೆಹಾಕಿದ್ದು, ಎರಡನೇ ಸ್ಥಾನದಲ್ಲಿರುವ ಹಂಗರಿ ಮತ್ತು ಉಜ್ಬೇಕಿಸ್ತಾನ ತಂಡಗಳಿಗಿಂತ ಎರಡು ಪಾಯಿಂಟ್‌ ಮುನ್ನಡೆ ಹೊಂದಿದೆ. ಇನ್ನು ಕೇವಲ ಮೂರು ಸುತ್ತಿನ ಪಂದ್ಯಗಳಷ್ಟೇ ಉಳಿದಿವೆ.