Friday, 22nd November 2024

Kamran Akmal: ಗಂಭೀರ್‌ ನನ್ನ ಸಹೋದರ ಇದ್ದಂತೆ ಎಂದ ಪಾಕ್‌ ಆಟಗಾರ

ಕರಾಚಿ: ಭಾರತ ತಂಡದ ಮಾಜಿ ಆಟಗಾರ, ಪ್ರಸ್ತುತ ಮುಖ್ಯ ಕೋಚ್‌ ಆಗಿರುವ ಗೌತಮ್‌ ಗಂಭೀರ್‌(Gautam Gambhir) ಬಗ್ಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಕಮ್ರಾನ್‌ ಅಕ್ಮಲ್‌(Kamran Akmal) ಅಚ್ಚರಿಯ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಗಂಭೀರ್‌ ನನ್ನ​ ಸಹೋದರ ಇದ್ದಂತೆ, ನಾವಿಬ್ಬರು ಇಬ್ಬರು ಒಳ್ಳೆಯ ಸ್ನೇಹಿತರೂ ಹೌದು ಎಂದು ಹೇಳಿದ್ದಾರೆ.

ʼಭಾರತ ಮತ್ತು ಪಾಕ್‌ ನಡುವಣ ಪಂದ್ಯದ ವೇಳೆ ನಾವಿಬ್ಬರು ಹಲವು ಬಾರಿ ಸ್ಲೆಡ್ಜಿಂಗ್‌ ಹಾಗೂ ಮಾತಿನ ಚಕಮಕಿ ನಡೆಸಿದ್ದೇವೆ. ಆದರೆ ಇದನ್ನು ಆಫ್‌ ಫೀಲ್ಡ್‌ನಲ್ಲಿ ನಾವು ಮುಂದುವರಿಸಿಲ್ಲ. ನಾವು ಉತ್ತಮ ಸ್ನೇಹಿತರಾಗಿದ್ದೇವೆʼ ಎಂದು ಅಕ್ಮಲ್‌ ಹೇಳಿದ್ದಾರೆ. ಭಾರತ ತಂಡದ ಹೆಡ್‌ ಕೋಚ್‌ ಆಗಿ ಗೌತಮ್‌ ಗಂಭೀರ್‌ ಚೊಚ್ಚಲ ಟೆಸ್ಟ್‌ ಸರಣಿಯನ್ನು ಗೆದ್ದಿದ್ದಾರೆ. ಇದೇ ರೀತಿ ಅವರ ಮಾರ್ಗದರ್ಶನ ಮುಂದುವರಿಸಲಿ ಎಂದು ಅಕ್ಮಲ್‌ ಹಾರೈಸಿದ್ದಾರೆ.

ಕೆಲ ದಿನಗಳ ಹಿಂದೆ ಕಮ್ರಾನ್‌ ಅಕ್ಮಲ್‌ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಸಲಹೆಯೊಂದನ್ನು ನೀಡಿದ್ದರು. ವೃತ್ತಿಪರತೆಯೊಂದಿಗೆ ಕ್ರಿಕೆಟ್‌ ಹೇಗೆ ಮುನ್ನಡೆಸಿಕೊಂಡು ಹೋಗಬೇಕು ಎಂಬುದನ್ನು ಬಿಸಿಸಿಐ ನೋಡಿ ಕಲಿಯಬೇಕು ಎಂದಿದ್ದರು.

ಇದನ್ನೂ ಓದಿ IND vs BAN 1st T20: ಬಿಗಿ ಭದ್ರತೆಯಲ್ಲಿ ನಾಳೆ ಭಾರತ-ಬಾಂಗ್ಲಾ ಟಿ20 ಫೈಟ್‌

“ಬಿಸಿಸಿಐನ ವೃತ್ತಿಪರತೆ, ಅವರ ಆಯ್ಕೆ ಮಂಡಳಿ, ನಾಯಕ ಮತ್ತು ತರಬೇತುದಾರರು… ಇವರೆಲ್ಲ ಸೇರಿಕೊಂಡು ತಂಡವನ್ನು ನಂಬರ್‌ ವನ್‌ ಪಟ್ಟಕ್ಕೆ ಏರಿಸಿದ್ದಾರೆ. ನಾವೂ ಇದೇ ಎತ್ತರ ತಲುಪಬೇಕಾದರೆ ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ ಬಿಸಿಸಿಐನ್ನು ಮಾದರಿಯಾಗಿರಿಸಿಕೊಂಡು ಕೆಲಸ ಮಾಡಬೇಕಿದೆ’ ಎಂದು ಕಮ್ರಾನ್‌ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಹೇಳಿದ್ದರು. ಇದೇ ವೇಳೆ, “ನಿಮ್ಮ ಅಹಂಕಾರದಿಂದಲೇ ಪಾಕಿಸ್ತಾನ ಕ್ರಿಕೆಟ್‌ ಸಂಕಟಕ್ಕೆ ಸಿಲುಕಿದೆ” ಎಂದು ಪಿಸಿಬಿಯನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. ಇದಾದ ಬಳಿಕ ಪಾಕಿಸ್ತಾನ ಕ್ರಿಕೆಟ್ ನಲ್ಲಿ ಹಲವಾರು ಬದಲಾವಣೆಗಳಾಗಿದ್ದವು. ತಂಡದ ನಾಯಕ, ಕೋಚ್ ಬದಲಾವಣೆ ಮಾಡಿದಂತೆ ಆಯ್ಕೆ ಸಮಿತಿಯನ್ನು ಕೂಡಾ ಬದಲು ಮಾಡಲಾಗಿತ್ತು. ವಹಾಬ್ ರಿಯಾಜ್ ಅವರನ್ನು ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು. ವಹಾಬ್‌ಗೆ ಸಹಾಯಕರನ್ನಾಗಿ ಮೂವರನ್ನು ನೇಮಕ ಮಾಡಲಾಗಿತ್ತು. ಇದರಲ್ಲಿ ಕಮ್ರಾನ್ ಅಕ್ಮಲ್ ಕೂಡ ಇದ್ದರು. ಆದರೆ ಈ ಸಮಿತಿ ನೇಮಕಗೊಂಡ ಕೆಲವೇ ತಿಂಗಳುಗಳಲ್ಲಿ ಮತ್ತೆ ಸಮಿತಿಯನ್ನು ಬದಲಾವಣೆ ಮಾಡಲಾಗಿತ್ತು.