Wednesday, 4th December 2024

Kane Williamson: ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಕೇನ್‌ ವಿಲಿಯಮ್ಸನ್‌

ಕ್ರೈಸ್ಟ್‌ಚರ್ಚ್‌: ನ್ಯೂಜಿಲ್ಯಾಂಡ್‌ ತಂಡದ ಮಾಜಿ ನಾಯಕ ಕೇನ್‌ ವಿಲಿಯಮ್ಸನ್‌(Kane Williamson) ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲೊಂದನ್ನು ತಲುಪಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ಬಾಳ್ವೆಯಲ್ಲಿ 9 ಸಾವಿರ ರನ್‌ ಪೂರೈಸಿದ್ದಾರೆ. ಈ ಸಾಧನೆ ಮಾಡಿದ ನ್ಯೂಜಿಲ್ಯಾಂಡ್‌(NZ vs ENG 1st Test) ಮೊದಲ ಹಾಗೂ ಒಟ್ಟಾರೆಯಾಗಿ ವಿಶ್ವದ 19ನೇ ಬ್ಯಾಟರ್‌ ಎನಿಸಿಕೊಂಡರು.

ಇಂಗ್ಲೆಂಡ್‌ ವಿರುದ್ಧ ತವರಿನ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯ ದ್ವಿತೀಯ ಇನಿಂಗ್ಸ್‌ನಲ್ಲಿ 26 ರನ್‌ ಬಾರಿಸುತ್ತಿದ್ದಂತೆ ವಿಲಿಯಮ್ಸನ್‌ ಈ ಸಾಧನೆಗೈದರು. ಅತಿ ಕಡಿಮೆ ಪಂದ್ಯಗಳಿಂದ(103) ಈ ಸಾಧನೆ ಮಾಡಿದ ವಿಶ್ವದ ಜಂಟಿ ಮೂರನೇ ಬ್ಯಾಟರ್‌ ಎನಿಸಿಕೊಂಡರು. ದಾಖಲೆ ಆಸ್ಟ್ರೇಲಿಯಾದ ಸ್ವೀವನ್‌ ಸ್ಮಿತ್‌(99 ಪಂದ್ಯ) ಹೆಸರಿನಲ್ಲಿದೆ.

ಇದೇ ವೇಳೆ ಅತಿ ಕಡಿಮೆ ಇನಿಂಗ್ಸ್‌ ಆಡಿ ಈ ಸಾಧನೆಗೈದ ಬ್ಯಾಟರ್‌ಗಳ ಯಾದಿಯಲ್ಲಿ ವಿಲಿಯಮ್ಸನ್‌ಗೆ 8ನೇ ಸ್ಥಾನ. ವಿಶ್ವ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಹಾಗೂ ನಾಯಕ ಕುಮಾರ ಸಂಗಕ್ಕರ ಹೆಸರಿನಲ್ಲಿದೆ. ಅವರು 172 ಪಂದ್ಯಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು. ಸದ್ಯ ವಿಲಿಯಮ್ಸನ್‌ 182* ಇನಿಂಗ್ಸ್‌ನಿಂದ 9035* ರನ್‌ ಬಾರಿಸಿದ್ದಾರೆ.

ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 93 ರನ್‌ ಬಾರಿಸಿದ್ದ ವಿಲಿಯಮ್ಸನ್‌ ದ್ವಿತೀಯ ಇನಿಂಗ್ಸ್‌ನಲ್ಲಿ 61 ರನ್‌ ಬಾರಿಸಿದರು. ಮೂರನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲ್ಯಾಂಡ್‌ 6 ವಿಕೆಟ್‌ಗೆ 155 ರನ್‌ ಬಾರಿಸಿ 4 ರನ್‌ ಮುನ್ನಡೆಯಲ್ಲಿದೆ. ಇನ್ನೂ ಎರಡು ದಿನಗಳ ಆಟ ಬಾಕಿ ಇರುವ ಕಾರಣ ಇಂಗ್ಲೆಂಡ್‌ಗೆ ಗೆಲುವಿನ ಅವಕಾಶ ಅಧಿಕವಾಗಿದೆ. ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 499 ರನ್‌ ಬಾರಿಸಿ 151 ರನ್‌ಗಳ ಇನಿಂಗ್ಸ್‌ ಮುನ್ನಡೆ ಸಾಧಿಸಿತು.