Sunday, 15th December 2024

ಆಸೀಸ್ ವಿರುದ್ದ ಚುಟುಕು ಸರಣಿಗೆ ವಿಲಿಯಮ್ಸನ್ ಅಲಭ್ಯ

ಬೆಂಗಳೂರು: ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಕೂಡ 3ನೇ ಮಗುವಿನ ನಿರೀಕ್ಷೆಯಲ್ಲಿದ್ದು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಚುಟುಕು ಸರಣಿಯಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.

ನ್ಯೂಜಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತೊಡಗಿರುವ ಕೇನ್ ವಿಲಿಯಮ್ಸನ್ ಅವರು ಮೊದಲ ಟೆಸ್ಟ್ ನ ಎರಡು ಇನ್ನಿಂಗ್ಸ್ ನಲ್ಲಿ ಶತಕದ ಸಂಭ್ರಮ ಕಂಡಿದ್ದರು. ಟೆಸ್ಟ್ ವೃತ್ತಿ ಜೀವನದಲ್ಲಿ 30ನೇ ಶತಕ ಸಿಡಿಸಿ ಆಸ್ಟ್ರೇಲಿಯಾದ ದಿಗ್ಗಜ ಡಾನ್ ಬ್ರಾಡ್ಮನ್ ಹಾಗೂ ಭಾರತದ ವಿರಾಟ್ ಕೊಹ್ಲಿ ಅವರ ಶತಕದ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ್ದರು. ಈ ಪಂದ್ಯದಲ್ಲಿ ಕಿವೀಸ್ 281 ರನ್‍ಗಳ ಗೆಲುವು ಸಾಧಿಸಿತ್ತು.

ಆಫ್ರಿಕಾದ ಟೆಸ್ಟ್ ಸರಣಿಯ ನಂತರ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವೆ ಫೆ.21 ರಿಂದ 3 ಟಿ 20 ಹಾಗೂ 2 ಟೆಸ್ಟ್ ಪಂದ್ಯಗಳು ಆಯೋಜನೆ ಗೊಂಡಿದ್ದು, ಮೂರನೇ ಮಗುವಿನ ನಿರೀಕ್ಷೆಯಲ್ಲಿರುವ ಕೇನ್ ವಿಲಿಯಮ್ಸ್ ಅವರು ವೈಟ್‍ಬಾಲ್ ಸರಣಿಗೆ ಲಭ್ಯರಾಗುವುದಿಲ್ಲ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ತಿಳಿಸಿದೆ.