Friday, 22nd November 2024

ವಿದರ್ಭಕ್ಕೆ ಸೋಲಿನ ಕಹಿ, ಫೈನಲ್‌ಗೆ ಕರ್ನಾಟಕ ಲಗ್ಗೆ

ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ 2ನೇ ಸೆಮಿಫೈನಲ್​ನಲ್ಲಿ ವಿದರ್ಭ ವಿರುದ್ದ ರೋಚಕ ಜಯ ಸಾಧಿಸಿ ಕರ್ನಾಟಕ ತಂಡ ಫೈನಲ್​ಗೆ ಪ್ರವೇಶಿಸಿದೆ.
ಬೃಹತ್ ಗುರಿ (177 ರನ್​) ಬೆನ್ನತ್ತಿದ ವಿರ್ದಭ ತಂಡವು ಭರ್ಜರಿ ಆರಂಭ ಪಡೆಯಿತು. ಆರಂಭಿಕರಾದ ಅಥರ್ವ ಥೈಡೆ ಹಾಗೂ ಗಣೇಶ್ ಸತೀಶ್ ಅಬ್ಬರಿಸಿದ್ದರು.

ಇದಕ್ಕೂ ಮುನ್ನ ಟಾಸ್ ಗೆದ್ದ ವಿದರ್ಭ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡರು. ಆದರೆ ಕರ್ನಾಟಕ ತಂಡ ಭರ್ಜರಿ ಆರಂಭ ಪಡೆಯಿತು. ಇಂದಿನ ಪಂದ್ಯದಲ್ಲಿ ರೋಹನ್ ಕದಮ್ ಜೊತೆ ಆರಂಭಿಕನಾಗಿ ಕಣಕ್ಕಿಳಿದ ಮನೀಷ್ ಪಾಂಡೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ವಿಕೆಟ್​ಗೆ 132 ರನ್ ಕಲೆ ಹಾಕಿದ ಈ ಜೋಡಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ರೋಹನ್ ಕದಮ್ ವಿದರ್ಭ ಬೌಲರುಗಳ ಬೆಂಡೆತ್ತಿದರು. 4 ಸಿಕ್ಸ್​ ಹಾಗೂ 7 ಬೌಂಡರಿಯೊಂದಿಗೆ 56 ಎಸೆತಗಳಲ್ಲಿ 87 ರನ್ ಬಾರಿಸಿ ಔಟಾದರು. ಮನೀಷ್ ಪಾಂಡೆ ಕೂಡ 3 ಸಿಕ್ಸ್ ಹಾಗೂ 2 ಬೌಂಡರಿಯೊಂದಿಗೆ 42 ಎಸೆತಗಳಲ್ಲಿ 54 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಅಷ್ಟರಲ್ಲಾಗಲೇ ಕರ್ನಾಟಕ ತಂಡವು 17 ಓವರ್​ನಲ್ಲಿ 150ರ ಗಡಿ ದಾಟಿತ್ತು. ಬಳಿಕ ಬಂದ ಅಭಿನವ್ ಮನೋ ಹರ್ 13 ಎಸೆತಗಳಲ್ಲಿ 2 ಸಿಕ್ಸ್, 2 ಫೋರ್​ನೊಂದಿಗೆ 27 ರನ್ ಬಾರಿಸಿದರು. 18 ಓವರ್​ ಮುಕ್ತಾಯದ ವೇಳೆಗೆ 174 ರನ್​ಗಳಿಸಿದ್ದ ಕರ್ನಾಟಕ ನಾಟಕೀಯ ಕುಸಿತಕ್ಕೊಳಗಾಯಿತು.

ಕರುಣ್ ನಾಯರ್ (5), ಅನಿರುದ್ಧ್ ಜೋಶಿ (0), ಶರತ್ (0), ಸುಚಿತ್ (0) ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದ್ದು, ಕರ್ನಾಟಕ ತಂಡವು ಅಂತಿಮ ಓವರ್​ನಲ್ಲಿ ಕಲೆ ಹಾಕಿದ್ದು ಕೇವಲ 1 ರನ್​ ಮಾತ್ರ.

ಬೃಹತ್ ಗುರಿ ಬೆನ್ನತ್ತಿದ ವಿರ್ದಭ ತಂಡವು ಭರ್ಜರಿ ಆರಂಭ ಪಡೆಯಿತು. ಆರಂಭಿಕರಾದ ಅಥರ್ವ ಥೈಡೆ ಹಾಗೂ ಗಣೇಶ್ ಸತೀಶ್ ಅಬ್ಬರಿಸಿದ್ದರು. ಪರಿಣಾಮ  ಮೊದಲ ವಿಕೆಟ್​ಗೆ 5 ಓವರ್​ನಲ್ಲಿ 46 ರನ್​ ಮೂಡಿಬಂತು. ಈ ಹಂತದಲ್ಲಿ ಕೆಸಿ ಕಾರ್ಯಪ್ಪ ಕರ್ನಾಟಕಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಬೆನ್ನಲ್ಲೇ ಸುಚಿತ್ ಎಸೆತದಲ್ಲಿ ಗಣೇಶ್ ಸತೀಶ್ (31) ಕೂಡ ವಿಕೆಟ್ ಒಪ್ಪಿಸಿದರು. ಇದಾಗ್ಯೂ ವಿದರ್ಭ ಮೊದಲ 10 ಓವರ್​ನಲ್ಲಿ 81 ರನ್​ ಕಲೆಹಾಕಿತು.

12ನೇ ಓವರ್ ಎಸೆದ ಕರುಣ್ ನಾಯರ್ ಕರ್ನಾಟಕಕ್ಕೆ ಮೂರನೇ ಯಶಸ್ಸು ತಂದುಕೊಟ್ಟರೆ, ಅದರ ಬೆನ್ನಲ್ಲೇ ಕೆಸಿ ಕಾರ್ಯಪ್ಪ ಮತ್ತೊಂದು ವಿಕೆಟ್ ಉರುಳಿಸಿ ದರು. ಕೊನೆಯ 6 ಓವರ್​ಗಳಲ್ಲಿ ವಿದರ್ಭ ತಂಡಕ್ಕೆ 64 ರನ್​ಗಳ ಅವಶ್ಯಕತೆಯಿತ್ತು. ಇದೇ ದರ್ಶನ್ ಕೂಡ ಒಂದು ವಿಕೆಟ್ ಕಬಳಿಸಿದರು. ಅಂತಿಮ 4 ಓವರ್​ಗಳಲ್ಲಿ ವಿದರ್ಭ ತಂಡವು 46 ರನ್​ಗಳ ಟಾರ್ಗೆಟ್ ಪಡೆಯಿತು.

ದರ್ಶನ್ ಎಂಬಿ ಎಸೆದ 18ನೇ ಓವರ್​ನಲ್ಲಿ 15 ರನ್​ ಬಾರಿಸುವ ಮೂಲಕ ವಿದರ್ಭ ಬ್ಯಾಟರ್​ಗಳು ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಕೊನೆಯ 2 ಓವರ್​ಗಳಲ್ಲಿ 27 ರನ್​ಗಳ ಗುರಿ ಪಡೆಯಿತು. ಕೊನೆಯ ಓವರ್​ನಲ್ಲಿ ವಿದರ್ಭ ತಂಡಕ್ಕೆ ಗೆಲ್ಲಲು 14 ರನ್​ಗಳ ಅವಶ್ಯಕತೆಯಿತ್ತು. ಅಂತಿಮ ಓವರ್​ನ ಮೊದಲ ಎಸೆತದಲ್ಲೇ ವಿದ್ಯಾಧರ್, ಅಕ್ಷಯ್ (22) ವಿಕೆಟ್ ಪಡೆದರು. 2ನೇ ಎಸೆತದಲ್ಲಿ ಕೇವಲ 1 ರನ್​ ನೀಡಿದರು. 3ನೇ ಎಸೆತದಲ್ಲಿ ವೈಡ್, ಪರಿಣಾಮ ವಿದರ್ಭ ತಂಡಕ್ಕೆ ಕೊನೆಯ 4 ಎಸೆತಗಳಲ್ಲಿ 12 ರನ್​ ಬೇಕಿತ್ತು. ಹೆಚ್ಚುವರಿ ಎಸೆತದಲ್ಲಿ 1 ರನ್ ನೀಡಿ, 4ನೇ ಎಸೆತದಲ್ಲಿ ಮತ್ತೆ 1 ರನ್. ಕೊನೆಯ 2 ಎಸೆತಗಳಲ್ಲಿ 10 ರನ್ ಬೇಕಿತ್ತು. 5ನೇ ಎಸೆತದಲ್ಲಿ 1 ರನ್. ಕೊನೆಯ ಎಸೆತದಲ್ಲಿ ಬೌಂಡರಿ ನೀಡಿದರೂ, ಕರ್ನಾಟಕ ತಂಡವು 4 ರನ್​ಗಳ ರೋಚಕ ಜಯ ಸಾಧಿಸಿತು.

ಫೈನಲ್​ನಲ್ಲಿ ತಮಿಳುನಾಡು ಹಾಗೂ ಕರ್ನಾಟಕ ತಂಡಗಳು ಮುಖಾಮುಖಿಯಾಗಲಿದೆ.