ಬೆಂಗಳೂರು: ಮುಂಬರುವ ರಣಜಿ ಟ್ರೋಫಿ(Ranji Trophy) ದೇಶೀಯ ಕ್ರಿಕೆಟ್ ಟೂರ್ನಿಯ ಮೊದಲ 2 ಪಂದ್ಯಗಳಿಗೆ ಕರ್ನಾಟಕ ತಂಡವನ್ನು(Karnataka squad for Ranji Trophy) ಪ್ರಕಟಿಸಲಾಗಿದೆ. ಮಯಾಂಕ್ ಅಗರ್ವಾಲ್(Mayank Agarwal) ತಂಡದ ನಾಯಕನಾದರೆ, ಮನೀಷ್ ಪಾಂಡೆ ಉಪನಾಯಕನಾಗಿದ್ದಾರೆ. 16 ಸದಸ್ಯರ ತಂಡ ಇದಾಗಿದೆ. ಸಂಭಾವ್ಯ ತಂಡದಲ್ಲಿ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಕೂಡ ಸ್ಥಾನ ಪಡೆದಿದ್ದರು. ಆದರೆ, ಅಂತಿಮ ತಂಡದಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ.
ಯುವ ಸ್ಪಿನ್ನರ್ ಮೊಹ್ಸಿನ್ ಖಾನ್ಗೆ ತಂಡದಲ್ಲಿ ಅವಕಾಶ ಲಭಿಸಿದೆ. ಶ್ರೇಯಸ್ ಗೋಪಾಲ್ ಮತ್ತೆ ರಾಜ್ಯ ತಂಡಕ್ಕೆ ಮರಳಿದ್ದರೆ. ಕಳೆದ ವರ್ಷ ತಂಡದಲ್ಲಿ ಸರಿಯಾದ ಅವಕಾಶ ಸಿಗುತ್ತಿಲ್ಲ ಎನ್ನುವ ಕಾರಣದಿಂದ ಶ್ರೇಯಸ್ ಗೋಪಾಲ್ ರಾಜ್ಯ ತಂಡವನ್ನು ತೊರೆದು ಕೇರಳ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಈ ವರ್ಷ ಮತ್ತೆ ರಾಜ್ಯ ತಂಡಕ್ಕೆ ಸೇರ್ಪಡೆಗೊಂಡಿದ್ದರು.
ಕಳೆದ ಋತುವಿನಲ್ಲಿ 23 ವಯೋಮಿತಿಯ ಸಿಕೆ ನಾಯ್ಡು ಟ್ರೋಫಿಯಲ್ಲಿ 30 ವಿಕೆಟ್ ಕಬಳಿಸುವ ಮೂಲಕ ಕರ್ನಾಟಕ ತಂಡದ ಪ್ರಶಸ್ತಿ ಗೆಲುವಿಗೆ ನೆರವಾಗಿದ್ದ 20 ವರ್ಷದ ಆಫ್-ಸ್ಪಿನ್ನರ್ ಮೊಹ್ಸಿನ್ ಖಾನ್ ಈ ಬಾರಿ ಸೀನಿಯರ್ ತಂಡಕ್ಕೆ ಪ್ರವೇಶ ಪಡೆದಿದ್ದಾರೆ. ವೇಗಿ ವಿದ್ವತ್ ಕಾವೇರಪ್ಪ ಗಾಯದಿಂದಾಗಿ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ದುಲೀಪ್ ಟ್ರೋಫಿ ಪಂದ್ಯದ ವೇಳೆ ಅವರು ಗಾಯಗೊಂಡಿದ್ದರು. 36 ಸಂಭಾವ್ಯ ಆಟಗಾರರ ಪಟ್ಟಿಯಲ್ಲಿದ್ದ ಅಭಿನವ್ ಮನೋಹರ್, ಶುಭಾಂಗ್ ಹೆಗ್ಡೆ, ಅನೀಶ್ ಕೆವಿ, ಚೇತನ್ ಎಲ್ಆರ್ ಪ್ರಧಾನ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಕರ್ನಾಟಕ ತಂಡ ಅಕ್ಟೋಬರ್ 11ರಿಂದ 14ರವರೆಗೆ ಇಂದೋರ್ನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಮಧ್ಯಪ್ರದೇಶವನ್ನು ಎದುರಿಸಲಿದ್ದರೆ. ದ್ವಿತೀಯ ಪಂದ್ಯವನ್ನು ಅಕ್ಟೋಬರ್ 18ರಿಂದ 21ರವರೆಗೆ ತವರು ಮೈದಾನವಾದ ಚಿನ್ನಸ್ವಾಮಿಯಲ್ಲಿ ಆಡಲಿದೆ. ಎದುರಾಳಿ ಕೇರಳ.
ಕರ್ನಾಟಕ ತಂಡ
ಮಯಾಂಕ್ ಅಗರ್ವಾಲ್ (ನಾಯಕ), ಮನೀಷ್ ಪಾಂಡೆ (ಉಪನಾಯಕ), ನಿಕಿನ್ ಜೋಸ್, ದೇವದತ್ ಪಡಿಕ್ಕಲ್, ಸ್ಮರಣ್ ಆರ್, ಶ್ರೇಯಸ್ ಗೋಪಾಲ್, ಸುಜಯ್ ಸಾತೆರಿ (ವಿ.ಕೀ), ಹಾರ್ದಿಕ್ ರಾಜ್, ವೈಶಾಕ್ ವಿಜಯ್ಕುಮಾರ್, ಪ್ರಸಿದ್ಧ ಕೃಷ್ಣ, ವಿ. ಕೌಶಿಕ್, ಲವನೀತ್ ಸಿಸೋಡಿಯಾ (ವಿ.ಕೀ), ಮೊಹ್ಸಿನ್ ಖಾನ್, ವಿದ್ಯಾಧರ್ ಪಾಟೀಲ್, ಕಿಶನ್ ಎಸ್. ಬಿದರೆ, ಅಭಿಲಾಷ್ ಶೆಟ್ಟಿ.