Saturday, 14th December 2024

ರಣಜಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ; ಅಗರ್ವಾಲ್ ನಾಯಕ

Karnataka squad for Ranji Trophy

ಬೆಂಗಳೂರು: ಮುಂಬರುವ ರಣಜಿ ಟ್ರೋಫಿ(Ranji Trophy) ದೇಶೀಯ ಕ್ರಿಕೆಟ್​ ಟೂರ್ನಿಯ ಮೊದಲ 2 ಪಂದ್ಯಗಳಿಗೆ ಕರ್ನಾಟಕ ತಂಡವನ್ನು(Karnataka squad for Ranji Trophy) ಪ್ರಕಟಿಸಲಾಗಿದೆ. ಮಯಾಂಕ್​ ಅಗರ್ವಾಲ್(Mayank Agarwal) ತಂಡದ ನಾಯಕನಾದರೆ, ಮನೀಷ್‌ ಪಾಂಡೆ ಉಪನಾಯಕನಾಗಿದ್ದಾರೆ. 16 ಸದಸ್ಯರ ತಂಡ ಇದಾಗಿದೆ. ಸಂಭಾವ್ಯ ತಂಡದಲ್ಲಿ ರಾಹುಲ್‌ ದ್ರಾವಿಡ್‌ ಅವರ ಪುತ್ರ ಸಮಿತ್‌ ದ್ರಾವಿಡ್‌ ಕೂಡ ಸ್ಥಾನ ಪಡೆದಿದ್ದರು. ಆದರೆ, ಅಂತಿಮ ತಂಡದಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ.

​ಯುವ ಸ್ಪಿನ್ನರ್​ ಮೊಹ್ಸಿನ್​ ಖಾನ್​ಗೆ ತಂಡದಲ್ಲಿ ಅವಕಾಶ ಲಭಿಸಿದೆ. ಶ್ರೇಯಸ್​ ಗೋಪಾಲ್​ ಮತ್ತೆ ರಾಜ್ಯ ತಂಡಕ್ಕೆ ಮರಳಿದ್ದರೆ. ಕಳೆದ ವರ್ಷ ತಂಡದಲ್ಲಿ ಸರಿಯಾದ ಅವಕಾಶ ಸಿಗುತ್ತಿಲ್ಲ ಎನ್ನುವ ಕಾರಣದಿಂದ ಶ್ರೇಯಸ್ ಗೋಪಾಲ್ ರಾಜ್ಯ ತಂಡವನ್ನು ತೊರೆದು ಕೇರಳ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಈ ವರ್ಷ ಮತ್ತೆ ರಾಜ್ಯ ತಂಡಕ್ಕೆ ಸೇರ್ಪಡೆಗೊಂಡಿದ್ದರು.

ಕಳೆದ ಋತುವಿನಲ್ಲಿ 23 ವಯೋಮಿತಿಯ ಸಿಕೆ ನಾಯ್ಡು ಟ್ರೋಫಿಯಲ್ಲಿ 30 ವಿಕೆಟ್​ ಕಬಳಿಸುವ ಮೂಲಕ ಕರ್ನಾಟಕ ತಂಡದ ಪ್ರಶಸ್ತಿ ಗೆಲುವಿಗೆ ನೆರವಾಗಿದ್ದ 20 ವರ್ಷದ ಆಫ್​-ಸ್ಪಿನ್ನರ್​ ಮೊಹ್ಸಿನ್​ ಖಾನ್​ ಈ ಬಾರಿ ಸೀನಿಯರ್​ ತಂಡಕ್ಕೆ ಪ್ರವೇಶ ಪಡೆದಿದ್ದಾರೆ. ವೇಗಿ ವಿದ್ವತ್​ ಕಾವೇರಪ್ಪ ಗಾಯದಿಂದಾಗಿ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ದುಲೀಪ್ ಟ್ರೋಫಿ ಪಂದ್ಯದ ವೇಳೆ ಅವರು ಗಾಯಗೊಂಡಿದ್ದರು. 36 ಸಂಭಾವ್ಯ ಆಟಗಾರರ ಪಟ್ಟಿಯಲ್ಲಿದ್ದ ಅಭಿನವ್​ ಮನೋಹರ್​, ಶುಭಾಂಗ್​ ಹೆಗ್ಡೆ, ಅನೀಶ್​ ಕೆವಿ, ಚೇತನ್​ ಎಲ್​ಆರ್​ ಪ್ರಧಾನ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಇದನ್ನೂ ಓದಿ Viral Video: ಕಾರಿನಲ್ಲಿ ಹೋಗುತ್ತಿದ್ದ ದಂಪತಿಯನ್ನು ಮಾರಕಾಸ್ತ್ರ ಹಿಡಿದುಕೊಂಡು ಬೆನ್ನಟ್ಟಿದ ದರೋಡೆಕೋರರು; ವಿಡಿಯೊ ವೈರಲ್‌

ಕರ್ನಾಟಕ ತಂಡ ಅಕ್ಟೋಬರ್​ 11ರಿಂದ 14ರವರೆಗೆ ಇಂದೋರ್​ನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಮಧ್ಯಪ್ರದೇಶವನ್ನು ಎದುರಿಸಲಿದ್ದರೆ. ದ್ವಿತೀಯ ಪಂದ್ಯವನ್ನು ಅಕ್ಟೋಬರ್​ 18ರಿಂದ 21ರವರೆಗೆ ತವರು ಮೈದಾನವಾದ ಚಿನ್ನಸ್ವಾಮಿಯಲ್ಲಿ ಆಡಲಿದೆ. ಎದುರಾಳಿ ಕೇರಳ.

ಕರ್ನಾಟಕ ತಂಡ

ಮಯಾಂಕ್​ ಅಗರ್ವಾಲ್​ (ನಾಯಕ), ಮನೀಷ್​ ಪಾಂಡೆ (ಉಪನಾಯಕ), ನಿಕಿನ್​ ಜೋಸ್​, ದೇವದತ್​ ಪಡಿಕ್ಕಲ್​, ಸ್ಮರಣ್​ ಆರ್​, ಶ್ರೇಯಸ್​ ಗೋಪಾಲ್​, ಸುಜಯ್​ ಸಾತೆರಿ (ವಿ.ಕೀ), ಹಾರ್ದಿಕ್​ ರಾಜ್​, ವೈಶಾಕ್​ ವಿಜಯ್​ಕುಮಾರ್​, ಪ್ರಸಿದ್ಧ ಕೃಷ್ಣ, ವಿ. ಕೌಶಿಕ್​, ಲವನೀತ್​ ಸಿಸೋಡಿಯಾ (ವಿ.ಕೀ), ಮೊಹ್ಸಿನ್​ ಖಾನ್​, ವಿದ್ಯಾಧರ್​ ಪಾಟೀಲ್​, ಕಿಶನ್​ ಎಸ್​. ಬಿದರೆ, ಅಭಿಲಾಷ್​ ಶೆಟ್ಟಿ.