Friday, 22nd November 2024

ಕಾರ್ತಿಕ್ ತ್ಯಾಗಿ ಮ್ಯಾಜಿಕ್ ಓವರ್‌ : 2 ರನ್‌ಗಳಿಂದ ಮುಗ್ಗರಿಸಿದ ಪಂಜಾಬ್ ಕಿಂಗ್ಸ್

ದುಬೈ: ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಮಯಾಂಕ್ ಅಗರ್ವಾಲ್ (67 ರನ್) ಹಾಗೂ ನಾಯಕ ಕೆಎಲ್ ರಾಹುಲ್ (49 ರನ್) ಜೋಡಿಯ ಬಿರುಸಿನ ಆಟ ಪ್ರದರ್ಶಿಸಿದರೂ ಕಡೇ ಓವರ್‌ನಲ್ಲಿ 4 ರನ್ ಪೇರಿಸಲು ವಿಫಲವಾದ ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 2 ರನ್‌ ಗಳಿಂದ ಮುಗ್ಗರಿಸಿತು.

ಕಡೇ ಓವರ್ ಎಸೆದ ಕಾರ್ತಿಕ್ ತ್ಯಾಗಿ ಕೇವಲ 1 ರನ್ ನೀಡಿ 2 ವಿಕೆಟ್ ಕಬಳಿಸಿ ರಾಜಸ್ಥಾನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಸೋಲಿ ನೊಂದಿಗೆ ಪಂಜಾಬ್ ತಂಡದ ಪ್ಲೇಆಫ್ ಹಾದಿ ಮತ್ತಷ್ಟು ಕಠಿಣಗೊಂಡರೆ, ರಾಜಸ್ಥಾನ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಕ್ಕೇರಿತು.

ದುಬೈ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ, ಉತ್ತಮ ಆರಂಭದಿಂದ 200 ಪ್ಲಸ್ ಮೊತ್ತದತ್ತ ಮುನ್ನಡೆದರೂ, ಸ್ಲಾಗ್ ಓವರ್‌ಗಳಲ್ಲಿ ಅರ್ಷದೀಪ್ ಸಿಂಗ್ (32ಕ್ಕೆ 5) ಹಾಗೂ ಮೊಹಮದ್ ಶಮಿ (21ಕ್ಕೆ 3) ಜೋಡಿಯ ದಾಳಿಗೆ ನಲುಗಿ 20 ಓವರ್‌ಗಳಲ್ಲಿ 185 ರನ್‌ಗಳಿಗೆ ಸರ್ವಪತನ ಕಂಡಿತು.

ಗೆಲ್ಲಲು 186 ರನ್ ಗುರಿ ಬೆನ್ನಟ್ಟಿದ್ದ ಪಂಜಾಬ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕೊನೆಯ ಓವರ್ ಬೌಲಿಂಗ್ ಮಾಡಿದ್ದ ಕಾರ್ತಿಕ್ ತ್ಯಾಗಿ ಎರಡು ವಿಕೆಟ್ ಗಳನ್ನು (2-29) ಕಬಳಿಸಿ ರಾಜಸ್ಥಾನಕ್ಕೆ ರೋಚಕ ಜಯ ತಂದುಕೊಟ್ಟರು. ಈ ಸಾಹಸಕ್ಕೆ ಕಾರ್ತಿಕ್ ಪಂದ್ಯಶ್ರೇಷ್ಟ ಗೌರವ ಪಡೆದರು.

ಇನಿಂಗ್ಸ್ ಆರಂಭಿಸಿದ ಮಯಾಂಕ್ ಹಾಗೂ ರಾಹುಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ 11.5 ಓವರ್ ಗಳಲ್ಲಿ 120 ರನ್ ಸೇರಿಸಿ ಭರ್ಜರಿ ಆರಂಭ ಒದಗಿಸಿ ದರು. ಮೊರಿಸ್ ಬೌಲಿಂಗ್ ನಲ್ಲಿ ಸಿಕ್ಸರ್ ಅನ್ನು ಸಿಡಿಸುವ ಮೂಲಕ ಮಯಾಂಕ್ ಕೇವಲ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಐಪಿಎಲ್ ನಲ್ಲಿ 2,000 ರನ್ ಪೂರೈಸಿದ ಮಯಾಂಕ್(67) ಅಬ್ಬರಕ್ಕೆ ರಾಹುಲ್ ಟೇವಾಟಿಯ ತೆರೆ ಎಳೆದರು.

ರಾಹುಲ್-ಮಯಾಂಕ್ ಔಟಾದ ಬಳಿಕ ಮರ್ಕರಮ್(ಔಟಾಗದೆ 26) ಹಾಗೂ ನಿಕೊಲಸ್ ಪೂರನ್(32)3ನೇ ವಿಕೆಟ್ ಜೊತೆಯಾಟದಲ್ಲಿ 57 ರನ್ ಸೇರಿಸಿದರು.