Thursday, 19th September 2024

ಡೆಲ್ಲಿಗೆ ಸೋಲಿನ ಬಿಸಿ, ಟಾಪ್ ನಾಲ್ಕರಲ್ಲಿ ಕೋಲ್ಕತ್ತಾ

ಶಾರ್ಜಾ: ಈಗಾಗಲೇ ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಂಡಿರುವ ಪ್ರಬಲ ಡೆಲ್ಲಿಯನ್ನು ತನ್ನ ಕರಾರುವಾಕ್‌ ಬೌಲಿಂಗ್‌ ದಾಳಿಯಿಂದ ಕಟ್ಟಿಹಾಕುವಲ್ಲಿ ಕೋಲ್ಕತಾ ನೈಟ್‌ರೈಡರ್ ಯಶಸ್ವಿಯಾಯಿತು. ಈ ಮೂಲಕ ತನ್ನ 4ನೇ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿದೆ.

ಮಂಗಳವಾರ ಮಾರ್ಗನ್‌ ಬಳಗ 3 ವಿಕೆಟ್‌ಗಳಿಂದ ಡೆಲ್ಲಿಯನ್ನು ಮಣಿಸಿತು. ಡೆಲ್ಲಿ ಗಳಿಸಿದ್ದು 9 ವಿಕೆಟಿಗೆ ಕೇವಲ 127 ರನ್‌. ಇದನ್ನು ಬೆನ್ನಟ್ಟುವ ವೇಳೆ ಆತಂಕದ ಕ್ಷಣವನ್ನು ಎದುರಿಸಿದ ಕೋಲ್ಕತಾ ಕೊನೆಗೂ 18.2 ಓವರ್‌ಗಳಲ್ಲಿ 7 ವಿಕೆಟಿಗೆ 130 ರನ್‌ ಬಾರಿಸಿತು.

ಚೇಸಿಂಗ್‌ ಹಾದಿಯಲ್ಲಿ ಶುಭಮನ್‌ ಗಿಲ್‌ (30), ನಿತೀಶ್‌ ರಾಣಾ (ಔಟಾಗದೆ 36), ಸುನೀಲ್‌ ನಾರಾಯಣ್‌ (21) ಬಿರುಸಿನ ಆಟವಾಡಿದರು. ವೆಂಕಟೇಶ್‌ ಅಯ್ಯರ್‌ (14) ಮತ್ತು ರಾಹುಲ್‌ ತ್ರಿಪಾಠಿ (9) ವಿಕೆಟ್‌ ಬೇಗನೆ ಉರುಳಿತು. ನಾಯಕ ಇಯಾನ್‌ ಮಾರ್ಗನ್‌ ಸೊನ್ನೆ ಸುತ್ತಿದರು.

ಸ್ಟ್ರೈಕ್‌ ಬೌಲರ್‌ ಅನ್ರಿಚ್‌ ನೋರ್ಜೆ ಮೊದಲ ಓವರ್‌ ಎಸೆದ ಬಳಿಕ ಪುನಃ ದಾಳಿಗಿಳಿದದ್ದು 17ನೇ ಓವರ್‌ನಲ್ಲಿ. ವೇಗಿ ಕಾಗಿಸೊ ರಬಾಡ ಅವರನ್ನು 6ನೇ ಬೌಲರ್‌ ರೂಪದಲ್ಲಿ ಬೌಲಿಂಗಿಗೆ ಇಳಿಸಲಾಗಿತ್ತು. ಅಕ್ಷರ್‌ ಪಟೇಲ್‌, ಆವೇಶ್‌ ಖಾನ್‌ ಅವರನ್ನೂ ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಆವೇಶ್‌ 3 ಓವರ್‌ಗಳಲ್ಲಿ 13 ರನ್ನಿಗೆ 3 ವಿಕೆಟ್‌ ಕಿತ್ತು ಮಿಂಚಿದರು.

ಡೆಲ್ಲಿಯನ್ನು ಬ್ಯಾಟಿಂಗಿಗೆ ಇಳಿಸುವ ಇಯಾನ್‌ ಮಾರ್ಗನ್‌ ನಿರ್ಧಾರವನ್ನು ಕೆಕೆಆರ್‌ ಬೌಲರ್ ಭರ್ಜರಿಯಾಗಿ ಸಮರ್ಥಿಸಿಕೊಳ್ಳತೊಡಗಿದರು. ಸ್ಲೋ ಟ್ರ್ಯಾಕ್‌ನಲ್ಲಿ ಡೆಲ್ಲಿ ಪರದಾಡತೊಡಗಿತು. ಮೂವತ್ತರ ಗಡಿ ದಾಟಲು ಸಾಧ್ಯವಾದದ್ದು ಸ್ಟೀವನ್‌ ಸ್ಮಿತ್‌ ಮತ್ತು ರಿಷಭ್‌ ಪಂತ್‌ ಅವರಿಂದ ಮಾತ್ರ. ಇಬ್ಬರೂ ತಲಾ 39 ರನ್‌ ಹೊಡೆದರು. ಕೊನೆಗಿದು ಪಂದ್ಯದ ಗರಿಷ್ಠ ವೈಯಕ್ತಿಕ ಮೊತ್ತ ವೆನಿಸಿತು. ಶಿಖರ್‌ ಧವನ್‌ 24 ರನ್‌ ಮಾಡಿದರು.

ಮೊದಲ ವಿಕೆಟಿಗೆ 5 ಓವರ್‌ಗಳಿಂದ 35 ರನ್‌ ಒಟ್ಟುಗೂಡಿತು. ಆದರೆ ಶ್ರೇಯಸ್‌ ಅಯ್ಯರ್‌ ಕೇವಲ ಒಂದು ರನ್‌ ಮಾಡಿ ನಿರ್ಗಮಿಸಿದರು. ಹೆಟ್‌ಮೈರ್‌ ಆಟ ನಾಲ್ಕೇ ರನ್ನಿಗೆ ಮುಗಿಯಿತು. ಲಲಿತ್‌ ಯಾದವ್‌, ಅಕ್ಷರ್‌ ಪಟೇಲ್‌ ಖಾತೆಯನ್ನೇ ತೆರೆಯಲಿಲ್ಲ. ಕೆಕೆಆರ್‌ ಪರ ಲಾಕಿ ಫ‌ರ್ಗ್ಯುಸನ್‌, ಸುನೀಲ್‌ ನಾರಾಯಣ್‌ ಮತ್ತು ಆಲ್‌ರೌಂಡರ್‌ ಆಗುವ ಸೂಚನೆ ನೀಡಿದ ವೆಂಕಟೇಶ್‌ ಅಯ್ಯರ್‌ ತಲಾ 2 ವಿಕೆಟ್‌ ಉರುಳಿಸಿದರು.

ಡೆಲ್ಲಿ ಸರದಿಯಲ್ಲಿ ಒಂದೂ ಸಿಕ್ಸರ್‌ ಸಿಡಿಯಲಿಲ್ಲ. ಐಪಿಎಲ್‌ನಲ್ಲಿ ಪೂರ್ತಿ 20 ಓವರ್‌ ಆಡಿದ ವೇಳೆ ಡೆಲ್ಲಿ ಇನ್ನಿಂಗ್ಸ್‌ನಲ್ಲಿ ಸಿಕ್ಸರ್‌ ದಾಖಲಾಗದ ಕೇವಲ 2ನೇ ನಿದರ್ಶನ ಇದಾಗಿದೆ. ಎರಡೂ ದೃಷ್ಟಾಂತ ಇದೇ ಋತುವಿ ನಲ್ಲಿ ಕಂಡುಬಂದದ್ದು ವಿಶೇಷ. ರಾಜಸ್ಥಾನ್‌ ವಿರುದ್ಧ ಮುಂಬಯಿಯಲ್ಲಿ ಆಡಲಾದ ಪಂದ್ಯದಲ್ಲೂ ಡೆಲ್ಲಿ ಇನ್ನಿಂಗ್ಸ್‌ ನಲ್ಲಿ ಸಿಕ್ಸರ್‌ ಕಂಡುಬಂದಿರಲಿಲ್ಲ.

ಈ ಇನ್ನಿಂಗ್ಸ್‌ ವೇಳೆ ರಿಷಭ್‌ ಪಂತ್‌ ಡೆಲ್ಲಿ ಪರ ಸರ್ವಾಧಿಕ ರನ್‌ ಬಾರಿಸಿದ ದಾಖಲೆ ನಿರ್ಮಿಸಿದರು (2,390).

ಸ್ಕೋರ್‌ ಪಟ್ಟಿ 
ಡೆಲ್ಲಿ ಕ್ಯಾಪಿಟಲ್ಸ್‌ 9 ವಿಕೆಟಿಗೆ 127

ಕೋಲ್ಕತಾ ನೈಡ್‌ರೈಡರ್
18.2 ಓವರ್‌ಗಳಲ್ಲಿ 7 ವಿಕೆಟಿಗೆ 130

ಪಂದ್ಯಶ್ರೇಷ್ಠ: ಸುನೀಲ್‌ ನಾರಾಯಣ್‌

Leave a Reply

Your email address will not be published. Required fields are marked *