Sunday, 8th September 2024

ಫೈನಲ್‌ಗೆ ಲಗ್ಗೆಯಿಟ್ಟ ಕೋಲ್ಕತ್ತ ನೈಟ್ ರೈಡರ್ಸ್

ಶಾರ್ಜಾ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಎರಡನೇ ಕ್ವಾಲಿಫೈಯರ್ ಹಣಾಹಣಿಯಲ್ಲಿ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿರುವ ಕೋಲ್ಕತ್ತ ನೈಟ್ ರೈಡರ್ಸ್ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಇನ್ನೂ ಒಂದು ಎಸೆತ ಬಾಕಿ ಉಳಿದಿರುವಂತೆಯೇ ಕೋಲ್ಕತ್ತ ಸ್ಮರಣೀಯ ಗೆಲುವು ದಾಖಲಿ ಸಿತು. ಇದೀಗ ಅ.15ರಂದು ನಡೆಯಲಿರುವ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ. ಕಳೆದ ಭಾನುವಾರ ನಡೆದ ಮೊದಲ ಕ್ವಾಲಿಫೈಯರ್‌ನಲ್ಲಿ ಡೆಲ್ಲಿ ತಂಡವನ್ನು ಮಣಿಸಿದ್ದ ಸಿಎಸ್‌ಕೆ ಫೈನಲ್‌ಗೆ ಪ್ರವೇಶಿಸಿತ್ತು.

ಏಯಾನ್ ಮಾರ್ಗನ್ ಪಡೆಯು ಎಲಿಮಿನೇಟರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವು ದಾಖಲಿಸಿತ್ತು. ಎರಡನೇ ಕ್ವಾಲಿಫೈಯರ್‌ನಲ್ಲಿ ಲೀಗ್ ಹಂತದ ಅಗ್ರಸ್ಥಾನಿ ಡೆಲ್ಲಿ ತಂಡಕ್ಕೆ ಸೋಲಿನ ರುಚಿ ತೋರಿಸಿದೆ. ಇದರೊಂದಿಗೆ ಡೆಲ್ಲಿ ತಂಡದ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿದೆ.

ವರುಣ್ ಚಕ್ರವರ್ತಿ (26ಕ್ಕೆ 2 ವಿಕೆಟ್) ಸೇರಿದಂತೆ ಕೆಕೆಆರ್ ಬೌಲರ್‌ಗಳ ಪ್ರಭಾವಿ ದಾಳಿಗೆ ಸಿಲುಕಿದ ಡೆಲ್ಲಿ ತಂಡವು ಐದು ವಿಕೆಟ್ ನಷ್ಟಕ್ಕೆ 135 ರನ್ ಗಳಿಸ ಲಷ್ಟೇ ಸಾಧ್ಯವಾಯಿತು.  ಬಳಿಕ ಗುರಿ ಬೆನ್ನತ್ತಿದ ಕೋಲ್ಕತ್ತ ತಂಡಕ್ಕೆ ವೆಂಕಟೇಶ್ ಅಯ್ಯರ್ (55) ಹಾಗೂ ಶುಭ ಮನ್ ಗಿಲ್ (46) ಮೊದಲ ವಿಕೆಟ್‌ಗೆ 96 ರನ್‌ಗಳ ಜೊತೆಯಾಟ ಕಟ್ಟುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕೊನೆಯ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ ರಾಹುಲ್ ತ್ರಿಪಾಠಿ (12*) ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.

ಉತ್ತಮವಾಗಿ ಆಡುತ್ತಿದ್ದ ಶುಭಮನ್ ಗಿಲ್ (46) ಪೆವಿಲಿಯನ್‌ಗೆ ಮರಳಿದರು. ಬೆನ್ನಲ್ಲೇ ದಿನೇಶ್ ಕಾರ್ತಿಕ್, ನಾಯಕ ಏಯಾನ್ ಮಾರ್ಗನ್, ಶಕಿಬ್ ಅಲ್ ಹಸನ್ ಹಾಗೂ ಸುನಿಲ್ ನಾರಾಯಣ್ ಖಾತೆ ತೆರೆಯಲಾಗದೇ ಔಟ್ ಆದರು.

ಆದರೆ ರವಿಚಂದ್ರನ್ ಅಶ್ವಿನ್ ಅವರ ಅಂತಿಮ ಓವರ್‌ನ ಐದನೇ ಎಸೆತವನ್ನು ಸಿಕ್ಸರ್‌ಗಟ್ಟಿದ ರಾಹುಲ್ ತ್ರಿಪಾಠಿ (12*) ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು. ಪರಿಣಾಮ 19.5 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಈ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡಕ್ಕೆ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಬಿರುಸಿನ ಆರಂಭವೊದಗಿಸಿ ದರು. ಈ ವೇಳೆ ದಾಳಿಗಿಳಿದ ವರುಣ್ ಚಕ್ರವರ್ತಿ, ಅಪಾಯಕಾರಿ ಪೃಥ್ವಿ ಶಾ (18) ಅವರನ್ನು ಎಲ್‌ಬಿಡಬ್ಯು ಬಲೆಗೆ ಬೀಳಿಸಿ ಜೊತೆಯಾಟವನ್ನು ಮುರಿದರು.

ಈ ಹಂತದಲ್ಲಿ ಜೊತೆಗೂಡಿದ ಶಿಖರ್ ಧವನ್ ಹಾಗೂ ಮಾರ್ಕಸ್ ಸ್ಟೋಯಿನಿಸ್ ನಿಧಾನಗತಿಯಲ್ಲಿ ರನ್ ಪೇರಿಸಿರುವುದು ಹಿನ್ನೆಡೆಗೆ ಕಾರಣವಾಯಿತು. 10 ಓವರ್ ಅಂತ್ಯಕ್ಕೆ ಡೆಲ್ಲಿ ಒಂದು ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿತ್ತು. ಬೆನ್ನಲ್ಲೇ ಮಾರ್ಕಸ್ ಸ್ಟೋಯಿನಿಸ್ 23 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು.

ಬಳಿಕ ಧವನ್ ಅವರಿಗೂ ಚಕ್ರವರ್ತಿ ಪೆವಿಲಿಯನ್ ಹಾದಿ ತೋರಿಸಿದರು. 39 ಎಸೆತಗಳನ್ನು ಎದುರಿಸಿದ ಧವನ್ 36 ರನ್ ಗಳಿಸಿದರು. 15 ಓವರ್‌ಗೆ ಮೂರು ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿತ್ತು.

ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಅಯ್ಯರ್ 27 ಎಸೆತಗಳಲ್ಲಿ 30 ರನ್ ಗಳಿಸಿ ಔಟಾಗದೆ ಉಳಿದರು. ಇನ್ನೊಂದೆಡೆ ಹೆಟ್ಮೆಯರ್ 10 ಎಸೆತಗಳಲ್ಲಿ ಎರಡು ಸಿಕ್ಸರ್ ನೆರವಿನಿಂದ 17 ರನ್ ಗಳಿಸಿದರು. ಇನ್ನುಳಿದಂತೆ ಅಕ್ಷರ್ ಪಟೇಲ್ 4 ರನ್ ಗಳಿಸಿದರು.

ಕೋಲ್ಕತ್ತ ಪರ 26 ರನ್ ತೆತ್ತ ಚಕ್ರವರ್ತಿ ಎರಡು ವಿಕೆಟ್ ಕಿತ್ತು ಮಿಂಚಿದರು. ಲಾಕಿ ಫರ್ಗ್ಯುಸನ್ ಹಾಗೂ ಶಿವಂ ಮಾವಿ ತಲಾ ಒಂದು ವಿಕೆಟ್ ಹಂಚಿದರು.

Leave a Reply

Your email address will not be published. Required fields are marked *

error: Content is protected !!