Friday, 1st November 2024

KL Rahul: ರಾಹುಲ್‌ ಆರ್‌ಸಿಬಿ ಸೇರುವುದು ಅನುಮಾನ; ಸುಳಿವು ಬಿಟ್ಟುಕೊಟ್ಟ ಅನಿಲ್ ಕುಂಬ್ಳೆ

ಬೆಂಗಳೂರು: ಲಕ್ನೋ(lucknow super giants) ತಂಡದಿಂದ ಹೊರಬಂದಿರುವ ಕನ್ನಡಿಗ ಕೆ.ಎಲ್‌ ರಾಹುಲ್‌(KL Rahul) ಆರ್‌ಸಿಬಿ (RCB) ಸೇರಲಿದ್ದಾರೆ ಎಂದು ಅಭಿಮಾನಿಗಳು ಸಂಭ್ರಮ ಶುರುಮಾಡಿರುವ ಬೆನ್ನಲ್ಲೇ, ಆರ್‌ಸಿಬಿ ಮಾಜಿ ಆಟಗಾರ, ಕನ್ನಡಿಗರೇ ಆದ ಅನಿಲ್ ಕುಂಬ್ಳೆ(Anil Kumble) ನಿರಾಸೆಯಾಗುವ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ರಾಹುಲ್‌ ಮುಂಬೈ ಇಂಡಿಯನ್ಸ್‌ ಸೇರುವ ಸಾಧ್ಯತೆ ಅಧಿಕವಾಗಿದೆ ಎಂದಿದ್ದಾರೆ.

ಗುರುವಾರ ನಡೆದ ಆಟಗಾರರ ರಿಟೇನ್‌ ಪ್ರಕ್ರಿಯೆ ಮುಕ್ತಾಯದ ಬಳಿಕ ಮಾತನಾಡಿದ ಅನಿಲ್ ಕುಂಬ್ಳೆ, ಮುಂಬೈ ಇಂಡಿಯನ್ಸ್‌ ತಂಡ ಇಶಾನ್‌ ಕಿಶನ್‌ ಅವರನ್ನು ಕೈ ಬಿಟ್ಟಿರುವ ಕಾರಣ ತಂಡಕ್ಕೆ ವಿಕೆಟ್‌ ಕೀಪರ್‌ ಕಮ್‌ ಆರಂಭಿಕ ಬ್ಯಾಟರ್‌ ಅಗತ್ಯವಿದೆ. ಹೀಗಾಗಿ ಮುಂಬೈ ರಾಹುಲ್‌ ಅವರನ್ನು ಹರಾಜಿನಲ್ಲಿ ದೊಡ್ಡ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯೊಂದು ಕಂಡು ಬಂದಿದೆ ಎಂದು ಕುಂಬ್ಳೆ ತಿಳಿಸಿದ್ದಾರೆ. ರಾಹುಲ್‌ ಆರಂಭಿಕ ಆಟಗಾರನ ರೋಲ್‌ ಜತೆಗೆ ಕೀಪಿಂಗ್‌ ಕೂಡ ಮಾಡಬಲ್ಲರು. ಈ ಹಿಂದೆ ಲಕ್ನೋ ಮತ್ತು ಪಂಜಾಬ್‌ ಕಿಂಗ್ಸ್‌ ತಂಡದ ಪರ ಆಡುವಾಗ ರಾಹುಲ್‌ ಇದೇ ಪಾತ್ರವನ್ನು ನಿಭಾಯಿಸುತ್ತಿದ್ದರು.

ಮುಂಬೈ ತಂಡದ ನಾಯಕನಾಗಿರುವ ಹಾರ್ದಿಕ್‌ ಪಾಂಡ್ಯ ರಾಹುಲ್‌ ಅವರ ಆತ್ಮೀಯ ಗೆಳೆಯ. ಹೀಗಾಗಿ ಪಾಂಡ್ಯ ಬಯಸಿದರೆ ಫ್ರಾಂಚೈಸಿ ಹರಾಜಿನಲ್ಲಿ ರಾಹುಲ್‌ರನ್ನು ಖರೀದಿ ಮಾಡುವ ಸಾಧ್ಯತೆಯೂ ಇದೆ. ಇನ್ನೊಂದೆಡೆ ರಾಹುಲ್‌ ಪತ್ನಿ ಅಥಿಯಾ ಶೆಟ್ಟಿ ಕರಾವಳಿ ಮೂಲದವರಾಗಿದ್ದರೂ ಕೂಡ ನೆಲೆಸಿರುವುದು ಮುಂಬೈಯಲ್ಲಿ. ರಾಹುಲ್‌ ಕೂಡ ಪತ್ನಿ ಜತೆ ಮುಂಬೈಯಲ್ಲೇ ವಾಸವಾಗಿದ್ದಾರೆ. ಈ ಆಯಾಮದಲ್ಲಿ ನೋಡುವಾಗ ರಾಹುಲ್‌ ಮುಂಬೈ ಪರ ಆಡಿದರೂ ಅಚ್ಚರಿಯಿಲ್ಲ. ಒಟ್ಟಾರೆ ರಾಹುಲ್‌ ಆರ್‌ಸಿಬಿ, ಮುಂಬೈ ಅಥವಾ ಯಾವ ತಂಡದ ಪಾಲಾಗಬಹುದು ಎಂಬ ಪ್ರಶ್ನೆಗೆ ಮೆಗಾ ಹರಾಜಿನ ಬಳಿಕ ಸ್ಪಷ್ಟ ಉತ್ತರ ಸಿಗಲಿದೆ.

ಇದನ್ನೂ ಓದಿ IPL 2025 Retention: ರಿಟೇನ್‌ನಲ್ಲಿ ಗರಿಷ್ಠ ಮೊತ್ತ ಪಡೆದ ಟಾಪ್ 10 ಆಟಗಾರರು

ಮುಂಬೈ ಇಂಡಿಯನ್ಸ್ ಒಟ್ಟು 5 ಆಟಗಾರರನ್ನು ರಿಟೇನ್‌ ಮಾಡಿಕೊಂಡಿದೆ. ಇನ್ನು ಫ್ರಾಂಚೈಸಿ ಬಳಿ 45 ಕೋಟಿ ರೂ. ಉಳಿದಿದೆ. ವೇಗಿ ಜಸ್‌ಪ್ರೀತ್‌ ಬುಮ್ರಾ ಅವರನ್ನು 8 ಕೋಟಿ ರೂ. ನೀಡಿ ಮೊದಲ ಆಯ್ಕೆಯ ಆಟಗಾರನಾಗಿ ತಂಡದಲ್ಲಿ ಉಳಿಸಿಕೊಂಡಿದೆ. ಉಳಿದಂತೆ ಮಾಜಿ ನಾಯಕ ರೋಹಿತ್‌ ಶರ್ಮಾ(16.30 ಕೋಟಿ ರೂ.), ಹಾಲಿ ನಾಯಕ ಹಾರ್ದಿಕ್‌ ಪಾಂಡ್ಯ(16.35 ಕೋಟಿ ರೂ.), ಸೂರ್ಯ ಕುಮಾರ್‌ ಯಾದವ್(16.35‌ ಕೋಟಿ ರೂ.), ತಿಲಕ್‌ ವರ್ಮಾ(8 ಕೋಟಿ ರೂ.)ಅವರನ್ನು ಉಳಿಸಿಕೊಂಡಿದೆ.

ಕೈಬಿಟ್ಟ ಪ್ರಮುಖ ಆಟಗಾರರು

ಇಶಾನ್ ಕಿಶನ್, ಟಿಮ್ ಡೇವಿಡ್, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ, ಹಾರ್ವಿಕ್ ದೇಸಾಯಿ, ವಿಷ್ಣು ವಿನೋದ್, ನಮನ್ ಧೀರ್, ಶಿವಾಲಿಕ್ ಶರ್ಮಾ, ನೆಹಾಲ್ ವಧೇರಾ, ಅರ್ಜುನ್ ತೆಂಡೂಲ್ಕರ್, ನುವಾನ್ ತುಷಾರ, ಲ್ಯೂಕ್ ವುಡ್, ಜೇಸನ್ ಬೆಹ್ರೆನ್‌ಡಾರ್ಫ್, ದಿಲ್ಶನ್ ಮಧುಶಂಕ, ಮೊಹಮ್ಮದ್‌ ನಬಿ.