ಪರ್ತ್: ಆಸ್ಟ್ರೇಲಿಯಾ ವಿರುದ್ಧ ಪರ್ತ್ನಲ್ಲಿ ನ.22ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್(IND vs AUS Test) ಪಂದ್ಯವನ್ನಾಡಲು ಎದುರು ನೋಡುತ್ತಿದ್ದ ಕನ್ನಡಿಗ ಕೆ.ಎಲ್ ರಾಹುಲ್(KL Rahul Injury) ಅಭ್ಯಾಸ ವೇಳೆ ಗಾಯಗೊಂಡು ಆಡುವ ಅವಕಾಶ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಭಾರತ ತಂಡ(Team India)ಕ್ಕೂ ಆತಂಕ ಸೃಷ್ಟಿಸಿದೆ.
ಭಾರತ ʼಎʼ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ರಾಹುಲ್ ಪ್ರಸಿದ್ಧ್ ಕೃಷ್ಣ ಎಸೆದ ಬೌನ್ಸರ್ ಎಸೆತವೊಂದನ್ನು ಹೊಡೆಯುವ ಯತ್ನದಲ್ಲಿ ಬಲ ಮೊಣಕೈಗೆ ಗಾಯ ಮಾಡಿಕೊಂಡಿದ್ದಾರೆ. ಗಾಯದಿಂದ ನರಳಿದ ರಾಹುಲ್ ಬ್ಯಾಟಿಂಗ್ ಅರ್ಧಕ್ಕೆ ಮೊಟಕುಗೊಳಿಸಿ ಫಿಸಿಯೊ ಜತೆ ಮೈದಾನ ತೊರೆದರು. ಸದ್ಯ ಅವರ ಗಾಯದ ಬಗ್ಗೆ ಯಾವುದೇ ಅಪ್ಡೇಟ್ ಲಭ್ಯವಿಲ್ಲ. ರಾಹುಲ್ ಅಭ್ಯಾಸ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಜತೆ ಆರಂಭಿಕನಾಗಿ ಇನಿಂಗ್ಸ್ ಆರಂಭಿಸಿದ್ದರು. ಒಂದೊಮ್ಮೆ ಗಾಯದ ಸ್ವರೂಪ ಗಂಭೀರ ಸ್ವರೂಪದಿಂದ ಕೂಡಿದ್ದರೆ ಮೊದಲ ಪಂದ್ಯದಿಂದ ಹೊರಗುಳಿಯಬಹುದು. ಅವರ ಬದಲು ಅಭಿಮನ್ಯು ಈಶ್ವರನ್ ಆಡಬಹುದು.
ರಾಹುಲ್ ಆರಂಭಿಕನಾಗಿ ವಿದೇಶಿ ಪ್ರವಾಸದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ರಾಹುಲ್ ಇದುವರೆಗೆ ಆರಂಭಿನಾಗಿ ವಿದೇಶಿ ನೆಲದಲ್ಲಿ ಒಟ್ಟು 29 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 48.93 ಸ್ಟ್ರೇಕ್ ರೇಟ್ನೊಂದಿಗೆ1682 ರನ್ ಕಲೆ ಹಾಕಿದ್ದಾರೆ. ಓಪನರ್ ಆಗಿ ವಿದೇಶದಲ್ಲಿ 158 ರನ್ ಗಳಿಸಿದ್ದು ಅವರ ಗರಿಷ್ಠ ಸಾಧನೆ. ಇದೇ ವೇಳೆ ನಾಲ್ಕು ಬಾರಿ ಶೂನ್ಯ ಸಂಕಟಕ್ಕೂ ಸಿಲುಕಿದ್ದರು.
ಇದನ್ನೂ ಓದಿ KL Rahul: ಆರಂಭಿಕನಾಗಿ ವಿದೇಶಿ ನೆಲದಲ್ಲಿ ರಾಹುಲ್ ಟೆಸ್ಟ್ ಸಾಧನೆ ಹೇಗಿದೆ?
ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರುವ ರಾಹುಲ್ಗೆ ಆಸೀಸ್ ಪ್ರವಾಸ ಒಂದು ರೀತಿಯಲ್ಲಿ ಸಾಮರ್ಥ್ಯ ಪ್ರದರ್ಶನಕ್ಕೆ ಅಗ್ನಿ ಪರೀಕ್ಷೆಯಾಗಿದೆ. ಆಸೀಸ್ ಎ ತಂಡದ ವಿರುದ್ಧ ರಾಹುಲ್ ಎರಡೂ ಇನಿಂಗ್ಸ್ನಲ್ಲಿ ವೈಫಲ್ಯ ಕಂಡಿದ್ದರು. ಇದೀಗ ಆಸೀಸ್ ಟೆಸ್ಟ್ನಲ್ಲಿಯೂ ವಿಫಲವಾದರೆ ರಾಹುಲ್ಗೆ ತಂಡದಿಂದ ಗೇಟ್ ಪಾಸ್ ಸಿಗುವುದು ಖಚಿತ. ನಿರೀಕ್ಷಿತ ಪ್ರದರ್ಶನ ತೋರಿದರೆ ತಂಡದಲ್ಲಿ ಇನ್ನೂ ಕೆಲ ಕಾಲ ಮುಂದುವರಿಯಬಹುದು.
ಗುರುವಾರ ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಶುಭ್ ಮನ್ ಗಿಲ್, ರವೀಂದ್ರ ಜಡೇಜಾ ಕಠಿಣ ಬ್ಯಾಟಿಂಗ್ ಅಭ್ಯಾಸ ನಡೆಸಿದರೆ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಸಿಂಗ್, ಆರ್.ಅಶ್ವಿನ್, ವಾಷಿಂಗ್ಟನ್ ಸುಂದರ್ ಬೌಲ್ ಮಾಡಿದರು.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ರಿಷಭ್ ಪಂತ್, ಸರ್ಫರಾಜ್ ಖಾನ್, ಧೃವ್ ಜುರೆಲ್, ಆರ್.ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್.