ಲಕ್ನೋ: 18ನೇ ಆವೃತ್ತಿಯ ಐಪಿಎಲ್(IPL 2025) ಆಟಗಾರರ ಹರಾಜಿಗೂ ಮುನ್ನ ನಡೆಯುವ ರಿಟೇನ್ ಪ್ರಕ್ರಿಯೆಗೆ ಎಲ್ಲ ಫ್ರಾಂಚೈಸಿಗಳು ಸಿದ್ಧತೆ ನಡೆಸುತ್ತಿವೆ. ಇದೇ 31ರಂದು ರಿಟೇನ್ ಪಟ್ಟಿ(IPL 2025 Retained) ಪ್ರಕಟಿಸಲು ಅಂತಿಮ ದಿನವಾಗಿದೆ. ಇದಕ್ಕೂ ಮುನ್ನವೇ ಲಕ್ನೋ ಸೂಪರ್ ಜೈಂಟ್ಸ್(LSG) ತಂಡದ ನಾಯಕರಾಗಿರುವ ಕನ್ನಡಿಗ ಕೆ.ಎಲ್. ರಾಹುಲ್(KL Rahul) ಅವರನ್ನು ತಂಡದಿಂದ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಇದಕ್ಕೆ ಪುಷ್ಠಿ ನೀಡುವಂತ ವಿಡಿಯೊ ಕೂಡ ವೈರಲ್ ಆಗಿದೆ.
ಲಕ್ನೋ ಸೂಪರ್ ಜೈಂಟ್ಸ್ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಸೋಮವಾರ ವಿಡಿಯೊವೊಂದನ್ನು ಹಂಚಿಕೊಂಡಿತ್ತು. ಇದರಲ್ಲಿ ರಾಹುಲ್ ಕಾಣಿಸಿಕೊಂಡಿರಲಿಲ್ಲ. ನಿಕೋಲಸ್ ಪೂರನ್, ಸ್ಟೋಯಿನಿಸ್, ಬಿಷ್ಟೋಯಿ, ಮಯಾಂಕ್ ಯಾದವ್, ನವೀನ್ ಉಲ್ ಹಕ್ ಸೇರಿ ಕೆಲ ಆಟಗಾರು ವಿಡಿಯೊದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ರಾಹುಲ್ ತಂಡ ತೊರೆಯುವುದು ಖಚಿತ ಎನ್ನಲಾಗಿದೆ.
ಮೂಲಗಳ ಪ್ರಕಾರ ಲಕ್ನೋ ಮುಂದಿನ ಆವೃತ್ತಿಗೆ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರಣ್ ಅವರನ್ನು ನಾಯಕನನ್ನಾಗಿ ಮಾಡುವ ಸಾಧ್ಯತೆ ಇದೆ. ಯುವ ವೇಗಿ ಮಾಯಾಂಕ್ ಯಾದವ್ ಮತ್ತು ಸ್ಪಿನ್ ಬೌಲರ್ ರವಿ ಬಿಷ್ಣೋಯಿ ಅವರನ್ನು ರಿಟೇನ್ ಮಾಡಿಕೊಳ್ಳಲು ಫ್ರಾಂಚೈಸಿ ಯೋಚಿಸಿದೆ ಎನ್ನಲಾಗಿದೆ.
ಎರಡು ತಿಂಗಳ ಹಿಂದೆ ರಾಹುಲ್ ಲಕ್ನೋ(LSG) ತಂಡದ ಮಾಲಿಕ ಸಂಜೀವ್ ಗೋಯೆಂಕಾ ಅವರನ್ನು ಕೋಲ್ಕತ್ತಾದ ಅಲಿಪುರದಲ್ಲಿರುವ ಅವರ ಕಚೇರಿಯಲ್ಲಿ ಭೇಟಿಯಾಗಿದ್ದರು. ಈ ವೇಳೆ ರಾಹುಲ್ ಮುಂದಿನ ಆವೃತ್ತಿಯಲ್ಲಿ ತಂಡದಲ್ಲಿ ಮುಂದುವರಿಯಲು ಆಸಕ್ತಿ ಹೊಂದಿಲ್ಲ ಎಂದು ಹೇಳಿರುವ ಸಾಧ್ಯತೆ ಇದೆ.
ಇದನ್ನೂ ಓದಿ IPL 2025: ಡೆಲ್ಲಿ ತೊರೆದು ಗುರುವಿನ ತಂಡ ಸೇರಲು ಮುಂದಾದ ಶಿಷ್ಯ ಪಂತ್
ಕಳೆದ ಆವೃತ್ತಿಯಲ್ಲಿ ಲಕ್ನೋ ತಂಡದ ಮಾಲಿಕ ಗೋಯೆಂಕಾ ತೋರಿದ್ದ ವರ್ತನೆನಿಂದ ರಾಹುಲ್ ಬೇಸರಗೊಂಡಿದ್ದರು. ಈ ವೇಳೆಯೇ ರಾಹುಲ್ ಮುಂದಿನ ಆವೃತ್ತಿಯಲ್ಲಿ ಲಕ್ನೋ ತೊರೆಯುವುದು ಬಹುತೇಕ ಖಚಿತ ಎನ್ನಲಾಗಿತ್ತು. ಹೀಗಾಗಿ ಅವರು ಆರ್ಸಿಬಿಗೆ ಬರಲಿದ್ದಾರೆ ಎನ್ನಲಾಗಿತ್ತು. ರಾಹುಲ್ ಆರ್‌ಸಿಬಿ ಸೇರಲಿದ್ದಾರಾ ಅಥವಾ ಬೇರೆ ಫ್ರಾಂಚೈಸಿ ಪಾಲಾಗಲಿದ್ದಾರಾ ಎಂಬುದು ಸದ್ಯದ ಕುತೂಹಲ.
ಫಾರ್ಮ್ ಕಳೆದುಕೊಂಡಿರುವ ರಾಹುಲ್
ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರುವ ರಾಹುಲ್ ಸದ್ಯ ಟೀಮ್ ಇಂಡಿಯಾದಲ್ಲಿಯೂ ಸ್ಥಾನ ಉಳಿಸಿಕೊಳ್ಳುವಲ್ಲಿ ಪರದಾಡುತ್ತಿದ್ದಾರೆ. ಏಕದಿನ ಮತ್ತು ಟಿ20 ತಂಡದಲ್ಲಿ ಅವಕಾಶ ಕಳೆದುಕೊಂಡಿರುವ ರಾಹುಲ್ ಟೆಸ್ಟ್ ತಂಡಕ್ಕೆ ಆಯ್ಕೆಯಾದರೂ ಆಡುವ ಬಳಗದಿಂದ ದೂರ ಉಳಿದಿದ್ದಾರೆ. ಬಾಂಗ್ಲಾ ವಿರುದ್ಧದ ಮತ್ತು ಕಿವೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅವಕಾಶ ನೀಡಿದರೂ ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದ್ದರು. ಹೀಗಾಗಿ ಅವರಿಗೆ ಹರಾಜಿನಲ್ಲಿ ದೊಡ್ಡ ಮೊತ್ತ ಸಿಗುವುದು ಕಷ್ಟ.