ಪರ್ತ್: ವಾಕಾದಲ್ಲಿ ನಡೆಯುತ್ತಿರುವ ಆಂತರಿಕ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಮೊಣಕೈಗೆ ಬಲವಾದ ಪೆಟ್ಟು ತಿಂದಿದ್ದ ಕನ್ನಡಿಗ ಕೆಎಲ್ ರಾಹುಲ್(KL Rahul) ಮತ್ತೆ ಮೈದಾನಕ್ಕಿಳಿದು ಅಭ್ಯಾಸ ಆರಂಭಿಸಿದ್ದಾರೆ. ಇದರೊಂದಿಗೆ ಭಾರತದ ಆತಂಕವನ್ನು ಕಡಿಮೆ ಮಾಡಿದ್ದಾರೆ.
ಶುಕ್ರವಾರದಂದು ರಾಹುಲ್ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಪ್ರಸಿದ್ಧ್ ಕೃಷ್ಣ ಅವರ ಬೌನ್ಸರ್ ಎಸೆತದಲ್ಲಿ ಮೊಣಕೈಗೆ ಗಾಯ ಮಾಡಿಕೊಂಡು ಮೈದಾನ ತೊರೆದಿದ್ದರು. ಗಾಯಗೊಂಡ ವೇಳೆ ರಾಹುಲ್ 29 ರನ್ ಗಳಿಸಿದ್ದರು. ಇದಾದ ಬಳಿಕ ಅವರು ಮೈದಾನಕ್ಕೆ ಇಳಿದಿರಲಿಲ್ಲ. ಹೀಗಾಗಿ ರಾಹುಲ್ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿತ್ತು. ಇಂದು(ಭಾನುವಾರ) ರಾಹುಲ್ ಮತ್ತೆ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಹೀಗಾಗಿ ರಾಹುಲ್ ನಾಯಕ ರೋಹಿತ್ ಶರ್ಮ ಗೈರಿನಲ್ಲಿ ಯಶಸ್ವಿ ಜೈಸ್ವಾಲ್ ಜತೆ ಪರ್ತ್‌ನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ರಾಹುಲ್ ಆರಂಭಿಕನಾಗಿ ವಿದೇಶಿ ಪ್ರವಾಸದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ರಾಹುಲ್ ಇದುವರೆಗೆ ಆರಂಭಿನಾಗಿ ವಿದೇಶಿ ನೆಲದಲ್ಲಿ ಒಟ್ಟು 29 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 48.93 ಸ್ಟ್ರೇಕ್ ರೇಟ್‌ನೊಂದಿಗೆ1682 ರನ್ ಕಲೆ ಹಾಕಿದ್ದಾರೆ. ಓಪನರ್ ಆಗಿ ವಿದೇಶದಲ್ಲಿ 158 ರನ್ ಗಳಿಸಿದ್ದು ಅವರ ಗರಿಷ್ಠ ಸಾಧನೆ. ಇದೇ ವೇಳೆ ನಾಲ್ಕು ಬಾರಿ ಶೂನ್ಯ ಸಂಕಟಕ್ಕೂ ಸಿಲುಕಿದ್ದರು.
ಕಳೆದ ತಿಂಗಳು ನ್ಯೂಜಿಲೆಂಡ್ ವಿರುದ್ಧದ ಬೆಂಗಳೂರು ಪಂದ್ಯದ ನಂತರ ಆಡುವ ಬಳಗದಿಂದ ಹೊರಗುಳಿದಿರುವ ರಾಹುಲ್, ಪುನರಾಗಮನದ ನಿರೀಕ್ಷೆಯಲ್ಲಿದ್ದಾರೆ. ಅವರು 2023ರಲ್ಲಿ ಕೊನೆಯದಾಗಿ ದಕ್ಷಿಣ ಆಫ್ರಿಕಾ ಎದುರು ಟೆಸ್ಟ್ ಶತಕ ಸಿಡಿಸಿದ್ದರು. ನಂತರ ಆಡಿದ ಆಡಿದ 9 ಇನಿಂಗ್ಸ್‌ಗಳಲ್ಲಿ 2 ಅರ್ಧಶತಕ ಮಾತ್ರಗಳಿಸಿದ್ದಾರೆ. ರಾಹುಲ್ ಫಿಟ್ ಆದರೂ ಶುಭಮನ್ ಗಿಲ್ ಫಿಟ್ ಆಗಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ KL Rahul: ಅಣಕು ಹರಾಜು; 20 ಕೋಟಿ ರೂ.ಗೆ ಆರ್ಸಿಬಿ ಪಾಲಾದ ರಾಹುಲ್!
ಶುಕ್ರವಾರ ಎರಡು ಬಾರಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಗಿಲ್, ಕ್ರಮವಾಗಿ 28 ಹಾಗೂ ಅಜೇಯ 42 ರನ್‌ಗಳಿಸಿದ್ದರು. ಸ್ಲಿಪ್‌ನಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದಾಗ ಚೆಂಡು ಹೆಬ್ಬೆರಳಿಗೆ ಬಡಿದು ಮೂಳೆ ಮುರಿತವಾಗಿದೆ ಎಂದು ತಿಳಿದುಬಂದಿದೆ. ಅವರ ಸಂಪೂರ್ಣ ಚೇತರಿಕೆಗೆ 14 ದಿನಗಳ ಅವಶ್ಯವಿದ್ದು, ಅಡಿಲೇಡ್‌ನಲ್ಲಿ ಡಿ.6ರಿಂದ ಆರಂಭವಾಗಲಿರುವ 2ನೇ ಪಂದ್ಯದ ವೇಳೆಗೆ ಸಂಪೂರ್ಣ ಫಿಟ್ ಆಗುವ ಸಾಧ್ಯತೆಗಳಿವೆ.