Thursday, 5th December 2024

KL Rahul: ‘ಕ್ರಮಾಂಕದ ಬಗ್ಗೆ ಚಿಂತಿಸಿಲ್ಲ’; ಆಡುವ ಬಳಗದಲ್ಲಿ ಚಾನ್ಸ್ ಸಿಕ್ಕರೆ ಸಾಕು ಎಂದ ರಾಹುಲ್

ಅಡಿಲೇಡ್‌: ಇಲ್ಲಿ ನಡೆಯಲಿರುವ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಜತೆ ನಾಯಕ ರೋಹಿತ್‌ ಶರ್ಮ ಅಥವಾ ಕೆ.ಎಲ್‌ ರಾಹುಲ್‌(KL Rahul) ಮಧ್ಯೆ ಯಾರು ಭಾರತದ ಇನಿಂಗ್ಸ್‌ ಆರಂಭಿಸಲಿದ್ದಾರೆ ಎಂದು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ರಾಹುಲ್‌ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌, ಮೊದಲ ನಾನು ಆಡುವ ಬಳಗದಲ್ಲಿ ಇರಲು ಬಯಸುತ್ತೇನೆ. ಕ್ರಮಾಂಕದ ಬಗ್ಗೆ ನಾನು ಚಿಂತಿಸಿಲ್ಲ. ಆಟದ ವಿವಿಧ ಸ್ವರೂಪಗಳಲ್ಲಿ ವಿಭಿನ್ನ ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡಿದ ಅನುಭವ ಇದೆ. ಹೀಗಾಗಿ ಆಡುವ ಬಳಗದಲ್ಲಿ ಸ್ಥಾನ ಸಿಕ್ಕರೆ ಸಾಕು ಎಂದಿದ್ದಾರೆ.

ಪಿಂಕ್‌ ಬಾಲ್‌ ಟೆಸ್ಟ್‌ ಬಗ್ಗೆ ಮಾತನಾಡಿದ ರಾಹುಲ್‌, ಇದು ನನ್ನ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದೆ. ತಂಡದಲ್ಲಿ ಇರುವ ಕೆಲವು ಆಟಗಾರರು ಈ ಮಾದರಿಯ ಟೆಸ್ಟ್‌ನಲ್ಲಿ ಹೊಂದಿರುವಂತಹ ಅನುಭವ ನನಗಿಲ್ಲ. ಹಾಗೆಯೇ ಪಿಂಕ್ ಬಾಲ್​​ನಲ್ಲಿ ಆಡುವುದು ಸ್ಪಲ್ಪ ಭಿನ್ನವಾಗಿದೆ. ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಡುವ ಕುತೂಹಲವಿದೆ ಎಂದು ಕೆಎಲ್ ರಾಹುಲ್ ಹೇಳಿದರು. ಅಡಿಲೇಡ್‌ ಟೆಸ್ಟ್‌ನಲ್ಲಿಯೂ ಆರಂಭಿಕಾಗಿ ಆಡುತ್ತೀರಾ ಎಂಬ ಪ್ರಶ್ನೆಗೆ ರಾಹುಲ್‌ ಸ್ಪಷ್ಟ ಉತ್ತರ ನೀಡಿಲ್ಲ. ಇದನ್ನು ಗುಟ್ಟಾಗಿಯೇ ಇಟ್ಟಿದ್ದಾರೆ.

ನೆಟ್ಸ್‌ನಲ್ಲಿ ಜೈಸ್ವಾಲ್‌ ಜತೆ ಅಬ್ಯಾಸ

ಮಂಗಳವಾರ ನಡೆದಿದ್ದ ನೆಟ್ಸ್‌ ಅಭ್ಯಾಸದಲ್ಲಿ ಯಶಸ್ವಿ ಜೈಸ್ವಾಲ್‌ ಮತ್ತು ಕೆ.ಎಲ್‌ ರಾಹುಲ್‌ ಒಂದೇ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದರು. ಆಸ್ಟ್ರೇಲಿಯ ಪ್ರಧಾನಮಂತ್ರಿ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಆಡಿದ್ದರೂ ರಾಹುಲ್ ಹಾಗೂ ಜೈಸ್ವಾಲ್ ಇನಿಂಗ್ಸ್ ಆರಂಭಿಸಿದ್ದರು.ಇದನ್ನು ನೋಡುವಾಗ ಟೀಮ್ ಮ್ಯಾನೇಜ್‌ಮೆಂಟ್ ಅಡಿಲೇಡ್‌ನಲ್ಲೂ ಈ ಜೋಡಿಯನ್ನು ಮುಂದುವರಿಸುವ ಸಾಧ್ಯತೆಯೂ ಇದೆ. ಪರ್ತ್ ಟೆಸ್ಟ್‌ನಲ್ಲಿ ಕೆ.ಎಲ್.ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಭಾರತದ ಇನಿಂಗ್ಸ್‌ ಆರಂಭಿಸಿದ್ದರು. ದ್ವಿತೀಯ ಇನಿಂಗ್ಸ್‌ನಲ್ಲಿ ಮೊದಲ ವಿಕೆಟ್‌ಗೆ ದಾಖಲೆಯ 205 ರನ್ ಜತೆಯಾಟ ನಡೆಸಿ ಗಮನಸೆಳೆದಿದ್ದರು.

ಸಂಭಾವ್ಯ ಆಡುವ ಬಳಗ

ರೋಹಿತ್ ಶರ್ಮ(ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್‌ ರಾಹುಲ್‌, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿಕೆಟ್‌ಕೀಪರ್), ಆರ್‌.ಅಶ್ವಿನ್‌, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಜಸ್‌ಪ್ರಿತ್ ಬುಮ್ರಾ.