Friday, 20th September 2024

KMF Nandini: ಫುಟ್ಬಾಲ್‌ ಲೀಗ್‌ಗೂ ನಂದಿನಿ ಪ್ರಾಯೋಜಕತ್ವ?

KMF Nandini

ಬೆಂಗಳೂರು: ಇತ್ತೀಚೆಗೆ ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್‌ ಹಾಗೂ ಐರ್ಲೆಂಡ್‌ ತಂಡಗಳಿಗೆ ಪ್ರಾಯೋಜಕತ್ವ ವಹಿಸಿದ್ದ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್‌), ಫುಟ್ಬಾಲ್‌ ಟೂರ್ನಿಯಲ್ಲಿಯೂ ನಂದಿನಿ(KMF Nandini)  ಬ್ರ್ಯಾಂಡ್  ಪ್ರಚಾರ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.  ಮುಂಬರುವ ಇಂಡಿಯನ್‌ ಸೂಪರ್‌ ಲೀಗ್‌(ISL football league)ನಲ್ಲಿ ತನ್ನ ವಿವಿಧ ಉತ್ಪನ್ನಗಳನ್ನು ಪರಿಚಯಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. 2024-25ರ ಐಎಸ್‌ಎಲ್‌ ಸೆಪ್ಟೆಂಬರ್‌ 13ರಿಂದ ಆರಂಭಗೊಳ್ಳಲಿದೆ. ಸುಮಾರು 6 ತಿಂಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 13 ತಂಡಗಳು ಪಾಲ್ಗೊಳ್ಳಲಿವೆ.

ಮೂಲಗಳ ಪ್ರಕಾರ ಕೆಎಂಎಫ್‌, ಈಗಾಗಲೇ ಲೀಗ್‌ ಆಯೋಜಕರ ಜತೆ ಒಪ್ಪಂದ ಮಾಡಿಕೊಂಡಿದೆ ಎನ್ನಾಗಿದ್ದು ಅಧಿಕೃತ ಪ್ರಕಟನೆಯೊಂದೆ ಬಾಕಿ ಎಂದು  ಗೊತ್ತಾಗಿದೆ. ಟೂರ್ನಿ ವೇಳೆ ಎಲ್‌ಇಡಿ ಬೋರ್ಡ್‌, ಪ್ರೆಸೆಂಟೇಶನ್‌, ಡಗ್‌ಔಟ್‌ನಲ್ಲಿ ನಂದಿನಿ ಹೆಸರಿನ ಜೊತೆಗೆ 300 ಸೆಕೆಂಡ್‌ಗಳ ಟಿವಿ ಹಾಗೂ ಒಟಿಟಿ ಜಾಹೀರಾತಿನ ಮೂಲಕವೂ ಬ್ರ್ಯಾಂಡ್‌ ಪ್ರಚಾರಕ್ಕೆ ಕೆಎಂಎಫ್‌ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈಗಾಗಲೇ ಮಲೇಷ್ಯಾ, ವಿಯೆಟ್ನಾಂ, ಸಿಂಗಾಪುರ, ಅಮೆರಿಕ, ದುಬೈ, ಯುಎಇ ಸೇರಿ ಮುಂತಾದ ರಾಷ್ಟ್ರಗಳಲ್ಲಿ ನಂದಿನಿ ಬ್ರ್ಯಾಂಡ್‌ ಪರಿಚಿತವಾಗಿದೆ.

ಐಸಿಸಿ ಪುರುಷರ ಟಿ–20 ಕ್ರಿಕೆಟ್‌ ವಿಶ್ವಕಪ್‌(T20 World Cup 2024) ಟೂರ್ನಿಯಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿ(KMF) ಸ್ಕಾಟ್ಲೆಂಡ್(Scotland) ಮತ್ತು ಐರ್ಲೆಂಡ್(Ireland) ತಂಡಗಳ ಪ್ರಾಯೋಜಕತ್ವ ಪಡೆದ ವೇಳೆ ಸಿಎಂ ಸಿದ್ದರಾಮಯ್ಯ(Siddaramaiah) ಅವರು ತಮ್ಮ ಅಧಿಕೃತ ಟ್ವಿಟರ್​ ಎಕ್ಸ್‌ ತಾಣದಲ್ಲಿ ಪೋಸ್ಟ್‌ ಮಾಡಿ ಹರ್ಷ ವ್ಯಕ್ತಪಡಿಸಿದ್ದರು. ‘ನಂದಿನಿ’ ಲಾಂಛನ ಜಾಗತಿಕ ಬ್ರ್ಯಾಂಡ್‌ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆ ಎಂದು ಹೇಳಿದ್ದರು.

ಇದನ್ನೂ ಓದಿ Duleep Trophy: ದುಲೀಪ್‌ ಟ್ರೋಫಿಯ ಮೊದಲ ಪಂದ್ಯದಿಂದ ಹೊರಗುಳಿದ ಸೂರ್ಯಕುಮಾರ್‌

ವಿರೋಧ ವ್ಯಕ್ತಪಡಿಸಿದ್ದ ಮೋಹನ್‌ದಾಸ್‌ ಪೈ

ಟಿ20 ವಿಶ್ವಕಪ್‌ನಲ್ಲಿ KMF ಪ್ರಾಯೋಜಕತ್ವ ಪಡೆದ ವೇಳೆ ಉದ್ಯಮಿ ಮೋಹನ್‌ದಾಸ್‌ ಪೈ (Mohandas Pai) ಅವರು  ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕೆಎಂಎಫ್‌ಗೆ ಕರ್ನಾಟಕ ರಣಜಿ ತಂಡ, ರಾಜ್ಯದ ಕ್ರೀಡಾಪಟುಗಳು, ಕಲಾವಿದರು, ರೈತರ ಮಕ್ಕಳು ಕಾಣುವುದಿಲ್ಲವೇ? ಇವುಗಳಿಗೇಕೆ ಪ್ರಾಯೋಜಕತ್ವ ನೀಡಬಹುದಿತಲ್ಲವೇ ಎಂದು ಪ್ರಶ್ನೆ ಮಾಡಿದ್ದರು. ಕೆಎಂಎಫ್ ಕನ್ನಡಿಗ ತೆರಿಗೆದಾರರ ಹಣ, ಸಬ್ಸಿಡಿ ಮತ್ತು ಬಜೆಟ್‌ನಿಂದ ಧನಸಹಾಯವನ್ನು ಪಡೆದುಕೊಳ್ಳುತ್ತದೆ. ಆದರೆ, ಯಾರಿಗೂ ಗೊತ್ತಿಲ್ಲದ ವಿದೇಶಿ ತಂಡಗಳಿಗೆ ಖರ್ಚು ಮಾಡಲು ಹೊರಟಿದೆ ಎಂದು ಆಕ್ರೋಶ ಹೊರಹಾಕಿದ್ದರು.