Friday, 18th October 2024

50ನೇ ಹುಟ್ಟುಹಬ್ಬ ಆಚರಿಸಿದ ಲೆಗ್ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ

ಬೆಂಗಳೂರು: ಟೀಂ ಇಂಡಿಯಾದ ಮಾಜಿ ಕ್ರಿಕೆಟರ್, ಅತೀ ಹೆಚ್ಚು ವಿಕೆಟ್ ಪಡೆದ ಹಾಗೂ ಒಂದೇ ಟೆಸ್ಟ್’ನಲ್ಲಿ ಎಲ್ಲಾ ಹತ್ತು ವಿಕೆಟ್ ಪಡೆದು ದಾಖಲೆ ನಿರ್ಮಿಸಿದ  ಲೆಗ್ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ ಅವರ ಜನ್ಮದಿನ ಇಂದು.  ಇಂದು ಅವರು 50ನೇ ವರ್ಷಕ್ಕೆ ಕಾಲಿಟ್ಟರು.

ಅನಿಲ್ ಕುಂಬ್ಳೆ ತಂಡದಲ್ಲಿ ಇದ್ದಾಗಲಂತೂ, ತಂಡಕ್ಕೆ ಗೆಲುವು ತಂದು ಕೊಡಲು ಬೇರೆ ಯಾವುದೇ ಅಸ್ತ್ರಗಳ ಅವಶ್ಯಕತೆ ಇರುತ್ತಿರಲಿಲ್ಲ ವೇನೋ.  ತಮ್ಮ ಕ್ರಿಕೆಟ್ ಜೀವನದಲ್ಲಿ ಒಟ್ಟು 619 ವಿಕೆಟ್ ಪಡೆದಿರುವ ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ, 337 ವಿಕೆಟ್”ಗಳನ್ನು ಏಕದಿನ ಪಂದ್ಯಗಳಲ್ಲಿ ಪಡೆದಿದ್ದಾರೆ.

ಅತೀ ವೇಗವಾಗಿ ಸ್ಪಿನ್ ಬೌಲಿಂಗ್ ಮಾಡುವ ಛಾತಿಯುಳ್ಳ ಕುಂಬ್ಳೆ,  ಎದುರಾಳಿಯನ್ನ ಕಂಗೆಡಿಸುವುದರಲ್ಲಿ ನಿಸ್ಸೀಮರು.  ಅತ್ಯಮೂಲ್ಯ  ವಿಕೆಟ್ ಪಡೆಯಲು ಕೊನೆ ಕ್ಷಣದವರೆಗೂ ಶ್ರಮಿಸುವ ಕುಂಬ್ಳೆ, ತಂಡದ ಪಾಲಿಗೆ ಮ್ಯಾಚ್ ವಿನ್ನರ್ ಆಗಿದ್ದವರು.
1994ರಲ್ಲಿ ಕೋಲ್ಕತಾದಲ್ಲಿ ವಿಂಡೀಸ್‍ಗೆ ಮೂಗುದಾರ ತೊಡಿಸಿದ್ದು, ಇಂದಿಗೂ ಆ ನೆನಪು ಹಸಿರಾಗಿಯೇ ಇದೆ. 12 ರನ್ ನೀಡಿ ಆರು ವಿಕೆಟ್ ಕಿತ್ತಿದ್ದರು. 

2002ರಲ್ಲಿ ವಿಂಡೀಸ್ ವಿರುದ್ದದ ಪಂದ್ಯದಲ್ಲಿ ದವಡೆ ಮುರಿದುಕೊಂಡರೂ, ಕುಂಬ್ಳೆ, ನಾಯಕ ಬ್ರಿಯಾನ್ ಲಾರಾ ಸೇರಿದಂತೆ, ಪ್ರಮುಖ ಎರಡು ವಿಕೆಟ್ ಕಿತ್ತು ತಂಡಕ್ಕೆ ಮೇಲುಗೈ ಕೊಡಿಸಿದ್ದರು. ಬಳಿಕ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತ್ತು. ವಿದೇಶದ ಪಂದ್ಯಗಳಲ್ಲೂ ತಂಡಕ್ಕೆ ಹಲವು ಗೆಲುವನ್ನು ತಂದು ಕೊಟ್ಟಿದ್ದಾರೆ. 2003-04 ರಲ್ಲಿ ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ಸರಣಿಯಲ್ಲಿ 24 ವಿಕೆಟ್ ಕಬಳಿಸಿ, ಸರಣಿಯನ್ನು 1- 1 ರಲ್ಲಿ ಡ್ರಾ ಮಾಡಿಸಿದ್ದರು.

ಪಾಕಿಸ್ತಾನದಲ್ಲಿ ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದಿತ್ತು. ಅದರಲ್ಲಿ ಕುಂಬ್ಳೆ ಐದು ವಿಕೆಟ್ ಕಬಳಿಸಿದ್ದರು. 2002ರಲ್ಲಿ ಸುಮಾರು 16 ವರ್ಷಗಳ ಬಳಿಕ, ಇಂಗ್ಲೆಂಡಿನ ಲೀಡ್ಸ್’ನಲ್ಲಿ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸುಮಾರು 110 ಟೆಸ್ಟ್ ಪಂದ್ಯಗಳನ್ನು ಆಡಿದ ಬಳಿಕ ಕುಂಬ್ಳೆ ತಮ್ಮ ಜೀವಮಾನದ ಮೊದಲ ಟೆಸ್ಟ್ ಶತಕವನ್ನು 2007ರಲ್ಲಿ ಲೀಡ್ಸ್’ನಲ್ಲಿ ಹೊಡೆದರು.

ಇದಕ್ಕೂ ಮೊದಲು, ಆಸೀಸ್ ನೆಲದಲ್ಲಿ ಯಾವನೇ ಭಾರತೀಯ ಶತಕ ಬಾರಿಸಿರಲಿಲ್ಲ. ತಮ್ಮದೇ ನಾಯಕತ್ವದಲ್ಲಿ ಪರ್ತ್’ನಲ್ಲಿ ಆಸೀಸ್ ವಿರುದ್ದ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲಿಸಿದರು. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಏಷ್ಯನ್ ಕ್ರಿಕೆಟ್ ಆಡುವ ರಾಷ್ಟ್ರವೆನಿಸಿತು. 2008ರಲ್ಲಿ ಎಲ್ಲಾ ಆವೃತ್ತಿಯ ಕ್ರಿಕೆಟ್’ಗೆ ನಿವೃತ್ತಿ ಹೇಳಿದರು.

ಸದ್ಯ ಐಪಿಎಲ್’ನಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ತಂಡದ ಕೋಚ್ ಆಗಿರುವ  ಕುಂಬ್ಳೆ ಈ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೂ ಕೋಚ್ ಆಗಿದ್ದಾರೆ.