Wednesday, 20th November 2024

Lionel Messi: ಮುಂದಿನ ವರ್ಷ ಕೇರಳಕ್ಕೆ ಬರಲಿದೆ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ

ತಿರುವನಂತಪುರಂ: ಹಾಲಿ ಫಿಫಾ ವಿಶ್ವಕಪ್‌ ಚಾಂಪಿಯನ್‌ ಅರ್ಜೆಂಟೀನಾ ಫುಟ್ಬಾಲ್ ತಂಡವು ಮುಂದಿನ ವರ್ಷ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯಕ್ಕಾಗಿ ಮುಂದಿನ ವರ್ಷ ಕೇರಳಕ್ಕೆ ಭೇಟಿ ನೀಡಲಿದೆ ಎಂದು ಕೇರಳ ಕ್ರೀಡಾ ಸಚಿವ ವಿ ಅಬ್ದುರಹಿಮಾನ್(V Abdurahiman) ಬುಧವಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಅಬ್ದುರಹಿಮಾನ್‌, ʼಪಂದ್ಯವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ ನಡೆಸಲಾಗುವುದು. ಈ ಉನ್ನತ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ಎಲ್ಲಾ ಹಣಕಾಸಿನ ನೆರವು ರಾಜ್ಯದ ವ್ಯಾಪಾರಿಗಳಿಂದ ಒದಗಿಸಲಾಗುವುದುʼ ಎಂದು ಹೇಳಿದರು. ಇದೇ ವೇಳೆ ಐತಿಹಾಸಿಕ ಪಂದ್ಯವನ್ನು ಆಯೋಜಿಸಲು ಕೇರಳ ಸರ್ಕಾರ ಕಾತರದಿಂದ ಕಾಯುತ್ತಿದೆ ಎಂದರು.

“ಈ ಸೌಹಾರ್ದ ಪಂದ್ಯ ಆಯೋಜನೆ ಅಷ್ಟು ಸುಲಭವಲ್ಲ. ಆದರೆ, ಇದು ಕೇರಳದ ಫುಟ್ಬಾಲ್ ಪ್ರೇಮಿಗಳಿಗೆ ಒಂದು ಕೊಡುಗೆಯಾಗಲಿದೆ. ಕೇರಳದಲ್ಲಿ ಅರ್ಜೆಂಟೀನಾ ತಂಡಕ್ಕೆ ಅಪಾರ ಅಭಿಮಾನಿಗಳಿದ್ದಾರೆ. ನೆಚ್ಚಿನ ತಂಡ ಆಡುವುದನ್ನು ನೋಡಲು ನಮ್ಮ ಜನರು ತೋರುತ್ತಿರುವ ಉತ್ಸಾಹ ನಮ್ಮನ್ನು ಈ ನಿಟ್ಟಿನಲ್ಲಿ ಮುನ್ನಡೆಯಲು ಪ್ರೇರೇಪಿಸುತ್ತಿದೆ” ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ ಫುಟ್ಬಾಲಿನ ಮೆಸ್‌ಮರೈಸಿಂಗ್‌ ಮೆಸ್ಸಿ

ಕಳೆದ ವರ್ಷವೇ ಮೆಸ್ಸಿ(Lionel Messi play in India) ಸಾರಥ್ಯದ ಅರ್ಜೆಂಟೀನಾ ತಂಡ ಕೇರಳದಲ್ಲಿ ಸೌಹಾರ್ದ ಪಂದ್ಯ ಆಡಲಿದೆ ಎಂದು ಸಿಎಂ ಪಿಣರಾಯ್​ ವಿಜಯನ್​(Pinarayi Vijayan) ಅವರು ಮೆಸ್ಸಿ ಅವರ ಜೆರ್ಸಿಯನ್ನು ಹಿಡಿದು ಅರ್ಜೆಂಟೀನಾ ತಂಡ ಕೇರಳಕ್ಕೆ ಬರುವ ವಿಚಾರವನ್ನು ತಿಳಿಸಿದ್ದರು.

ಮೆಸ್ಸಿ 2011 ರಲ್ಲಿ ಕೊನೆಯ ಬಾರಿಗೆ ಭಾರತದಲ್ಲಿ ಫುಟ್ಬಾಲ್‌ ಪಂದ್ಯವನ್ನಾಡಿದ್ದರು. ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ವೆನೆಜುವೆಲಾ ವಿರುದ್ಧದ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯ ಇದಾಗಿತ್ತು. ಈ ಪಂದ್ಯ ಗೋಲು ರಹಿತ ಡ್ರಾದಲ್ಲಿ ಕೊನೆಗೊಂಡಿತ್ತು. ಮೆಸ್ಸಿ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲೂ ಕೇರಳದಲ್ಲಿ ಅಧಿಕ. ಮುಂದಿನ ವರ್ಷ ನಡೆಯುವ ಈ ಸೌಹಾರ್ದ ಪಂದ್ಯದಲ್ಲಿ ಭಾರತ ತಂಡದ ಜತೆ ಅರ್ಜೆಂಟೀನಾ ಆಡಲಿದೆ. ಇದೊಂದು ಭಾರತೀಯ ಫುಟ್ಬಾಲ್‌ ಇತಿಹಾಸದಲ್ಲಿ ಐತಿಹಾಸಿಕ ಕ್ಷಣವಾಗಲಿದೆ.

ಸ್ನೇಹಾರ್ಥ ಪಂದ್ಯವನ್ನಾಡುವ ಅರ್ಜೆಂಟೀನಾ ತಂಡದ ಪ್ರಸ್ತಾವವನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್(All India Football Federation) ತಿರಸ್ಕರಿಸಿತ್ತು. ಇದರಿಂದ ಭಾರತದ ಮೆಸ್ಸಿ ಅಭಿಮಾನಿಗಳು ಬೇಸರಗೊಂಡಿದ್ದರು. ಆ ಬಳಿಕ ಕೇರಳ ಸರ್ಕಾರ ಈ ಪಂದ್ಯವನ್ನು ನಡೆಸುವ ಉಸ್ತುವಾರಿ ವಹಿಸಿಕೊಂಡಿತು.

ಕೇರಳದಲ್ಲಿ ಫುಟ್ಬಾಲ್​ ಕ್ರೇಜ್​ ಕ್ರಿಕೆಟ್​ಗಿಂತ ಹೆಚ್ಚು. ಅದರಲ್ಲೂ ಮೆಸ್ಸಿ ಅವರಿಗಂತೂ ಹೆಚ್ಚಿನ ಅಭಿಮಾನಿಗಳು ಇದ್ದಾರೆ. ಕಳೆದ ಕತಾರ್​ ಫಿಫಾ ವಿಶ್ವ ಕಪ್​ ವೇಳೆ ಸಾಗರದ ಆಳದಲ್ಲಿ ಮೆಸ್ಸಿಯ ಕಟೌಟ್ ನಿಲ್ಲಿಸಿದ್ದು ಭಾರಿ ಸುದ್ದಿಯಾಗಿತ್ತು. ಅರ್ಜೆಂಟೀನಾ ತಂಡಕ್ಕೆ ಬೆಂಬಲ ಸೂಚಿಸಿದ್ದಕ್ಕಾಗಿ ಸ್ವತಃ ಮೆಸ್ಸಿ ಅವರೇ ಟ್ವೀಟ್​ ಮೂಲಕ ಕೇರಳದ ಜನತೆಗೆ ಧನ್ಯವಾದ ತಿಳಿಸಿದ್ದರು. ಇದೀಗ ನೆಚ್ಚಿನ ಆಟಗಾರ ತಮ್ಮ ತವರಿಗೆ ಬರುತ್ತಿದ್ದಾರೆ ಎನ್ನುವ ವಿಷಯ ತಿಳಿದಿರುವ ಕೇರಳದ ಜನತೆಯಲ್ಲಿ ಸಂಭ್ರಮ ಮನೆ ಮಾಡಿದೆ.