Sunday, 15th December 2024

ಆರ್‌ಸಿಬಿ ಅಭಿಮಾನಿಗೆ ಯುವತಿ ಪ್ರೇಮ ನಿವೇದನೆ: ವಿಡಿಯೊ ವೈರಲ್‌

ಪುಣೆ: ಆರ್‌ಸಿಬಿ ಅಭಿಮಾನಿಯೊಬ್ಬರಿಗೆ ಯುವತಿ ಪ್ರೇಮ ನಿವೇದನೆ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬುಧವಾರ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಈ ಪ್ರಸಂಗ ನಡೆದಿದೆ. ಈ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರ್‌ಸಿಬಿ 13 ರನ್‌ ಅಂತರದಿಂದ ಗೆಲುವು ಸಾಧಿಸಿತ್ತು. ಈ ಮೂಲಕ ಆರ್‌ಸಿಬಿ ಆಡಿರುವ 11 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 5ರಲ್ಲಿ ಸೋಲು ಕಂಡಿದೆ. ಇದರೊಂದಿಗೆ 12 ಅಂಕಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.

ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಯುವಕನ ಬಳಿ ತೆರಳಿದ ಯುವತಿ ಉಂಗುರ ಮುಂದಿಟ್ಟು ಪ್ರೇಮ ನಿವೇದನೆ ಮಾಡಿದ್ದಾಳೆ. ಇದಕ್ಕೆ ಯುವಕ ಒಪ್ಪಿಕೊಂಡಿ ದ್ದಾನೆ. ಗ್ಯಾಲರಿಯಲ್ಲಿ ಕುಳಿತ್ತಿದ್ದ ಕ್ರೀಡಾಭಿಮಾನಿಗಳು ನವ ಜೋಡಿಗೆ ಶುಭ ಹಾರೈಸಿದ್ದಾರೆ.

ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಾಸಿಂ ಜಾಫರ್, ‘ಆರ್‌ಸಿಬಿ ಅಭಿಮಾನಿಗೆ ಪ್ರೇಮ ನಿವೇದನೆ ಮಾಡಿದ ಬುದ್ಧಿವಂತ ಹುಡುಗಿ. ಅವನು ಆರ್‌ಸಿಬಿಗೆ ನಿಷ್ಠನಾಗಿರಲು ಸಾಧ್ಯವಾದರೆ, ಆತ ಖಂಡಿತವಾಗಿಯೂ ತನ್ನ ಸಂಗಾತಿಗೂ ನಿಷ್ಠನಾಗಿರುತ್ತಾನೆ. ಒಳ್ಳೆಯ ದಿನ’ ಎಂದು ಬರೆದುಕೊಂಡಿ ದ್ದಾರೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತ್ತು.

174 ರನ್‌ಗಳ ಗುರಿ ಬೆನ್ನತ್ತಿದ್ದ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 160 ರನ್ ಗಳಿಸಿತು. ಈ ಮೂಲಕ ಆರ್‌ಸಿಬಿ 13 ರನ್ ಗೆಲುವು ಸಾಧಿಸಿತು.