Friday, 22nd November 2024

ಕಂಚಿನ ಪದಕಕ್ಕೆ ತೃಪ್ತಿಪಟ್ಟ ಬಾಕ್ಸರ್ ಲವ್ಲಿನಾ ಬೋರ್ಗೊಹೈನ್

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಭಾರತದ ಬಾಕ್ಸರ್ ಲವ್ಲಿನಾ ಬೋರ್ಗೊಹೈನ್ ಸೆಮಿಫೈನಲ್‌ನಲ್ಲಿ ಸೋಲನು ಭವಿಸಿದ್ದಾರೆ. ಈ ಮೂಲಕ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದಿರುವ ಪದಕಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಮಹಿಳಾ ಬಾಕ್ಸಿಂಗ್‌ನ 69 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಲವ್ಲಿನಾ, ಎದುರಾಳಿ ಅಗ್ರ ಶ್ರೇಯಾಂಕಿತೆ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ಧ 0-5ರಿಂದ ಸೋಲು ಅನುಭವಿಸಿದರು. ಆಗಲೇ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿರುವ ಲವ್ಲಿನಾ, ಚಿನ್ನದ ಪದಕ ಗುರಿಯನ್ನಿರಿಸಿದ್ದರು. ಆದರೆ ನಾಲ್ಕರ ಘಟ್ಟದಲ್ಲಿ ಎಡವಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೂರನೇ ಬಾಕ್ಸರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಹಿಂದೆ 2008ರಲ್ಲಿ ವಿಜೇಂದರ್ ಹಾಗೂ 2012ರಲ್ಲಿ ಮೇರಿ ಕೋಮ್ ಕಂಚಿನ ಪದಕ ಗೆದಿದ್ದರು.

ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಯ ಅಪೆಜ್ ನಡೈನ್ ವಿರುದ್ಧ 3-2ರಲ್ಲಿ ಗೆಲುವು ಸಾಧಿಸಿದ ಲವ್ಲಿನಾ ಬೋರ್ಗೊಹೈನ್, ಕ್ವಾರ್ಟರ್ ಫೈನಲ್‌ನಲ್ಲಿ ಚೀನಾ ತೈಪೆಯ ಚೆನ್‌ ನೀನ್ ಚಿನ್ ವಿರುದ್ಧ 4-1ರಲ್ಲಿ ಜಯ ಸಾಧಿಸಿದರು. ಆದರೆ, ಸೆಮಿಫೈನಲ್‌ನಲ್ಲಿ ಸುರ್ಮೆನೆಲಿ ಬುಸೆನಜ್‌ ವಿರುದ್ಧ 0-5ರಲ್ಲಿ ಸೋಲನುಭವಿಸಿದರು.