ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಇನ್ನೊಂದು ಕಡೆ ಲಖನೌ ಸೂಪರ್‌ಜೈಂಟ್ಸ್ ತಂಡದ ನಾಯಕ, ಕನ್ನಡಿಗ ಕೆ.ಎಲ್.ರಾಹುಲ್ ಅವರ ಆಟವನ್ನು ಆಸ್ವಾದಿಸುವ ಅವಕಾಶ ಪ್ರೇಕ್ಷಕರಿಗೆ ಒದಗಿಬಂದಿದೆ.
ಮೂರು ವರ್ಷಗಳ ನಂತರ ರಾಹುಲ್ ತಮ್ಮ ತವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯವಾಡಲಿದ್ದಾರೆ.
ಲಖನೌ ತಂಡವು ಇದೇ ಮೊದಲ ಬಾರಿ ಉದ್ಯಾನನಗರಿಯಲ್ಲಿ ಕಣಕ್ಕಿಳಿಯಲಿದೆ. ಕಳೆದ ಬಾರಿ ರಾಹುಲ್ ಬಳಗವು ಕೋಲ್ಕತ್ತದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದಿದ್ದ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಎದುರು ಮಣಿದಿತ್ತು.
ಆರ್‌ಸಿಬಿ ಬೆಂಗಳೂರಿನಲ್ಲಿಯೇ ನಡೆದಿದ್ದ ಮುಂಬೈ ವಿರುದ್ಧದ ಮೊದಲ ಹಣಾಹಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಕೋಲ್ಕತ್ತದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಮುಗ್ಗರಿ ಸಿತ್ತು. ಆ ಪಂದ್ಯದಲ್ಲಿ ಎಡಗೈ ವೇಗಿ ಡೇವಿಡ್ ವಿಲಿ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಗಳಿಸಿ ಆರ್‌ಸಿಬಿಗೆ ಆರಂಭದಲ್ಲಿಯೇ ಭರವಸೆ ಮೂಡಿದ್ದರು.
11ನೇ ಓವರ್ ನಂತರ ಕೋಲ್ಕತ್ತ ತಂಡದ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಅಬ್ಬರಕ್ಕೆ ಉಳಿದ ಬೌಲರ್‌ಗಳ ಲಯ ತಪ್ಪಿತು. 23 ಇತರೆ ರನ್‌ಗಳೂ ಹರಿದುಹೋದವು.
ಆರಂಭಿಕ ಮುನ್ನಡೆ ಬಳಸಿಕೊಂಡು ಪಂದ್ಯದ ಮೇಲೆ ಹಿಡಿತ ಸಾಧಿಸುವ ತಂತ್ರಗಾರಿಕೆಯಲ್ಲಿ ಫಫ್ ಡುಪ್ಲೆಸಿ ನಾಯಕತ್ವ ವಿಫಲ ವಾಯಿತು. ಆದರೆ ಲಖನೌ ತಂಡವು ಸನ್‌ರೈಸರ್ಸ್ ಎದುರಿನ ಪಂದ್ಯದಲ್ಲಿ ಇಂತಹದೇ ಸನ್ನಿವೇಶದಲ್ಲಿ ಯಶಸ್ವಿಯಾಗಿತ್ತು. 50 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಸನ್‌ರೈಸರ್ಸ್ ತಂಡವನ್ನು 121 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ್ದ ರಾಹುಲ್ ಬಳಗವು ಪಂದ್ಯವನ್ನು ಜಯಿಸಿತ್ತು.