Thursday, 19th September 2024

Maharaja Trophy 2024: ಚೊಚ್ಚಲ ಪ್ರಶಸ್ತಿಗಾಗಿ ಬೆಂಗಳೂರು-ಮೈಸೂರು ತಂಡಗಳ ಮಧ್ಯೆ ಇಂದು ಫೈನಲ್‌ ಕಾದಾಟ

Maharaja Trophy 2024

ಬೆಂಗಳೂರು: ಇಂದು(ಭಾನುವಾರ) ನಡೆಯುವ ಮಹಾರಾಜ ಟಿ20 ಕ್ರಿಕೆಟ್‌(Maharaja Trophy 2024) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ಹಾಗೂ ಮೈಸೂರು ವಾರಿಯರ್ಸ್‌ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಇತ್ತಂಡಗಳು ಕೂಡ ಚೊಚ್ಚಲ ಪ್ರಶಸ್ತಿ ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯುವ ಕಾರಣ ಈ ಪಂದ್ಯವನ್ನು ಹೈವೋಲ್ಟೇಜ್‌ ಎಂದು ನಿರೀಕ್ಷಿಸಬಹುದು. ಮೈಸೂರು ತಂಡಕ್ಕೆ ಇದು ಸತತ 2ನೇ ಫೈನಲ್‌ ಪಂದ್ಯವಾಗಿದೆ.  ಕಳೆದ ಆವೃತ್ತಿಯಲ್ಲಿ ಹುಬ್ಬಳ್ಳಿ ವಿರುದ್ಧ ಸೋಲು ಕಂಡು ರನ್ನರ್‌-ಅಪ್‌ ಆಗಿತ್ತು. ಬೆಂಗಳೂರು ತಂಡ 2022ರಲ್ಲಿ ಫೈನಲ್‌ ಪ್ರವೇಶಿಸಿ ಸೋಲು ಕಂಡಿತ್ತು.

ಶನಿವಾರ ನಡೆದಿದ್ದ  ಟೂರ್ನಿಯ 2ನೇ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ ಮೇಸೂರು ತಂಡ ರೋಚಕ 9 ರನ್‌ ರೋಚಕ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿತ್ತು. ಗೆಲುವಿನೊಂದಿಗೆ ಕಳೆದ ಬಾರಿ ಫೈನಲ್‌ ಸೋಲಿಗೆ ಮೈಸೂರು ತಂಡ ಸೇಡು ತೀರಿಸಿಕೊಂಡಿತ್ತು. ಶುಕ್ರವಾರ ನಡೆದಿದ್ದ ಮೊದಲ ಸೆಮಿ ಪಂದ್ಯದಲ್ಲಿ ಬೆಂಗಳೂರು ತಂಡ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಫೈನಲ್‌ ಪ್ರವೇಶಿಸಿತ್ತು.

https://x.com/maharaja_t20/status/1829937318980911491

ನಿನ್ನೆ ನಡೆದ ಸೆಮಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಮೈಸೂರು ವಾರಿಯರ್ಸ್‌  ಕಾರ್ತಿಕ್‌ (53) ಅರ್ಧಶತಕ ಹಾಗೂ  ಶ್ರೀನಿವಾಸ್‌ ಶರತ್‌ (26), ಮನೋಜ್‌ ಭಾಂಡಗೆ (26) ಉಪಯುಕ್ತ ಬ್ಯಾಟಿಂಗ್‌ ಕೊಡುಗೆಯಿಂದ  8 ವಿಕೆಟ್‌ಗೆ 177 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹುಬ್ಬಳ್ಳಿ ಕಾರ್ತಿಕೇಯ ಕೆ.ಪಿ. ಹೋರಾಟದ ಹೊರತಾಗಿಯೂ 20 ಓವರ್‌ಗಳಲ್ಲಿ 168 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಕಾರ್ತಿಕೇಯ 39 ಎಸೆತಗಳಲ್ಲಿ ಔಟಾಗದೆ 61 ರನ್‌ ಗಳಿಸಿದರು. ತಿಪ್ಪಾರೆಡ್ಡಿ 19 ಎಸೆತಗಳಲ್ಲಿ 33 ರನ್‌ ಬಾರಿಸಿದರು. ಆದರೆ ತಂಡ ಸೋಲು ಕಂಡ ಕಾರಣ ಇವರ ಬ್ಯಾಟಿಂಗ್‌ ಹೋರಾಟ ವ್ಯರ್ಥವಾಯಿತು.

https://x.com/StarSportsKan/status/1829925988035084369

ಮಳೆ ಸಾಧ್ಯತೆ

ಫೈನಲ್‌ ಪಂದ್ಯಕ್ಕೆ ಮಳೆ ಸಾಧ್ಯತೆ ಕಂಡುಬಂದಿದೆ. ಈಗಾಗಲೇ ಹವಾಮಾನ ಇಲಾಖೆ ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಮೊದಲ ಸೆಮಿ ಪಂದ್ಯಕ್ಕೂ ಮಳೆ ಭೀತಿ ಎದುರಾಗಿ 20 ನಿಮಿಷ ತಡವಾಗಿ ಪಂದ್ಯ ಆರಂಭಗೊಂಡಿತ್ತು. ಪಂದ್ಯ ಚಿನ್ನಸ್ವಾಮಿ ಕ್ರೀಡಾಗಂಣದಲ್ಲಿ ನಡೆಯುತ್ತಿರುವ ಕಾರಣ ಮಳೆ ಬಂದರೂ ಚಿಂತೆ ಪಡುವ ಅಗತ್ಯವಿಲ್ಲ. ಏಕೆಂದರೆ ಈ ಮೈದಾನದಲ್ಲಿ ಮಳೆ ನೀರು ಇಂಗಿಸುವ ಸುಸಜ್ಜಿತ ಸಬ್​ಏರ್​ ಸಿಸ್ಟಮ್​ ಹೊಂದಿರುವ ಕಾರಣ ಮಳೆ ನಿಂತ ಕೆಲವೇ ನಿಮಿಷದಲ್ಲಿ ಪಂದ್ಯ ನಡೆಸಬಹುದು.

ಸಂಭಾವ್ಯ ತಂಡಗಳು

ಬೆಂಗಳೂರು: ಮಯಾಂಕ್ ಅಗರ್ವಾಲ್ (ನಾಯಕ), ಎಲ್‌.ಆರ್ ಚೇತನ್, ಭುವನ್ ರಾಜು, ಸೂರಜ್ ಅಹುಜಾ (ವಿಕೀ), ಶುಭಾಂಗ್ ಹೆಗ್ಡೆ, ಅನಿರುದ್ಧ ಜೋಶಿ, ಕ್ರಾಂತಿ ಕುಮಾರ್, ನವೀನ್, ಮೊಹ್ಸಿನ್ ಖಾನ್, ಲವಿಶ್ ಕೌಶಲ್, ಸಂತೋಕ್ ಸಿಂಗ್.

ಮೈಸೂರು: ಎಸ್‌ಯು ಕಾರ್ತಿಕ್, ಕೋದಂಡ ಅಜಿತ್ ಕಾರ್ತಿಕ್, ಕರುಣ್ ನಾಯರ್ (ನಾಯಕ), ಶ್ರೀನಿವಾಸ್ ಶರತ್, ಹರ್ಷಿಲ್ ಧರ್ಮನಿ, ಸುಮಿತ್ ಕುಮಾರ್ (ವಿಕೀ), ಜಗದೀಶ ಸುಚಿತ್, ಕೃಷ್ಣಪ್ಪ ಗೌತಮ್, ಮನೋಜ್ ಭಾಂಡಗೆ, ವಿದ್ಯಾಧರ್ ಪಾಟೀಲ್, ಧನುಷ್ ಗೌಡ.