Saturday, 23rd November 2024

Mahipal Lomror: ತ್ರಿಶತಕ ಸಿಡಿಸಿ ಐಪಿಎಲ್‌ ಫ್ರಾಂಚೈಸಿಗಳಿಗೆ ಸಂದೇಶ ರವಾನಿಸಿದ ಆರ್‌ಸಿಬಿ ಸ್ಟಾರ್‌!

Mahipal Lomror smashes triple century to send reminder to IPL franchises

ನವದೆಹಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಿಂದ ಬಿಡುಗಡೆಯಾಗಿರುವ ರಾಜಸ್ಥಾನ್‌ ತಂಡದ ಬ್ಯಾಟ್ಸ್‌ಮನ್‌ ಮಹಿಪಾಲ್‌ ಲೊಮ್ರೊರ್‌ (Mahipal Lomror) ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ತ್ರಿಶತಕ ಸಿಡಿಸಿದ್ದಾರೆ. ಆ ಮೂಲಕ ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಮೆಗಾ ಹರಾಜಿನ ನಿಮಿತ್ತ ಎಲ್ಲಾ ಫ್ರಾಂಚೈಸಿಗಳ ಗಮನವನ್ನು ಸೆಳೆದಿದ್ದಾರೆ.

ಡೆಹ್ರಾಡೂನ್‌ನ ಅಭಿಮನ್ಯು ಕ್ರಿಕೆಟ್‌ ಅಕಾಡೆಮಿಯ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯ ಬಿ ಗುಂಪಿನ ಉತ್ತರಾಖಂಡ ಎದುರಿನ ಪಂದ್ಯದಲ್ಲಿ ಮಹಿಪಾಲ್‌ ಲೊಟ್ರೊರ್‌ ಈ ಸಾಧನೆ ಮಾಡಿದ್ದಾರೆ. ಪ್ರಥಮ ಇನಿಂಗ್ಸ್‌ನಲ್ಲಿ ಮನಮೋಹಕ ಬ್ಯಾಟಿಂಗ್‌ ಪ್ರದರ್ಶನ ತೋರಿದ ಮಹಿಪಾಲ್‌ ಲೊಮ್ರೊರ್‌, 360 ಎಸೆತಗಳಲ್ಲಿ ಬರೋಬ್ಬರಿ 13 ಸಿಕ್ಸರ್‌ ಹಾಗೂ 25 ಬೌಂಡರಿಗಳೊಂದಿಗೆ 300 ರನ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ರಾಜಸ್ಥಾನ್‌ ರಾಯಲ್ಸ್‌ ತಂಡ 145.4 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 660 ರನ್‌ಗಳನ್ನು ಕಲೆ ಹಾಕಿತು. ಅಂತಿಮವಾಗಿ ರಾಜಸ್ಥಾನ್‌ ತಂಡದ ನಾಯಕ ದೀಪಕ್‌ ಹೂಡ ಪ್ರಥಮ ಇನಿಂಗ್ಸ್‌ ಅನ್ನು ಡಿಕ್ಲೇರ್‌ ಮಾಡಿಕೊಂಡರು.

ಮಹಿಪಾಲ್‌ ಲೊಮ್ರೊರ್‌ಗೆ ಚೊಚ್ಚಲ ತ್ರಿಶತಕ

ರಾಜಸ್ಥಾನ್‌ ತಂಡ ಪಂದ್ಯದ ಮೊದಲನೇ ದಿನ 23 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್‌ಗೆ ಬಂದಿದ್ದ ಮಹಿಪಾಲ್‌ ಲೊಮ್ರೊರ್‌ ಎರಡನೇ ದಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ತಮ್ಮ ಚೊಚ್ಚಲ ತ್ರಿಶತಕವನ್ನು ದಾಖಲಿಸಿದರು. ಮತೊಂದು ತುದಿಯಲ್ಲಿ ಕಾರ್ತಿಕ್‌ ಶರ್ಮಾ (113 ರನ್‌) ಅವರೊಂದಿಗೆ ಮುರಿಯದ ಐದನೇ ವಿಕೆಟ್‌ಗೆ ಮಹಿಪಾಲ್‌ 177 ರನ್‌ಗಳನ್ನು ಕಲೆ ಹಾಕಿದರು. ನಂತರ ಭರತ್‌ ಶರ್ಮಾ ಅವರೊಂದಿಗೆ ಮಹಿಪಾಲ್‌ 116 ರನ್‌ಗಳ ಜತೆಯಾಟವನ್ನು ಆಡಿದ್ದರು.

ಮಹಿಪಾಲ್‌ ಲೊಮ್ರೊರ್‌ ಅವರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿನ ಮೊದಲ ತ್ರಿಶತಕ ಇದಾಗಿದೆ. ಅಲ್ಲದೆ ರಾಜಸ್ಥಾನ್‌ ಪರ ರಣಜಿ ಟ್ರೋಫಿಯಲ್ಲಿ ತ್ರಿಶತಕ ಸಿಡಿಸಿದ ಎರಡನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಮಹಿಪಾಲ್‌ ಲೊಮ್ರೊರ್‌ ಬರೆದಿದ್ದಾರೆ. ಇದಕ್ಕೂ ಮುನ್ನ ರಾಜಸ್ಥಾನ್‌ ಪರ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಚೋಪ್ರಾ(301*) ತ್ರಿಶತಕ ಸಿಡಿಸಿದ್ದರು. ಮಹಾರಾಷ್ಟ್ರ ವಿರುದ್ಧ ಇವರು ತ್ರಿಶತಕ ಸಿಡಿಸಿದ್ದರು.

ಪ್ರಸಕ್ತ ಆವೃತ್ತಿಯಲ್ಲಿ 500 ರನ್‌ ಕಲೆ ಹಾಕಿರುವ ಲೊಮ್ರೊರ್‌

ಪ್ರಸಕ್ತ ರಣಜಿ ಟ್ರೋಫಿ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಮಹಿಪಾಲ್‌ ಲೊಮ್ರೊರ್‌ ಅವರು ಇಲ್ಲಿಯ ತನಕ ಆಡಿದ ಐದು ಪಂದ್ಯಗಳಿಂದ 500ಕ್ಕೂ ಹೆಚ್ಚಿನ ರನ್‌ಗಳನ್ನು ಕಲೆ ಹಾಕಿದ್ದಾರೆ. ಇನ್ನು ಮಹಿಪಾಲ್‌ ಲೊಮ್ರೊರ್‌ ಅವರು ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಆಡಿದ 54 ಪಂದ್ಯಗಳ 84 ಇನಿಂಗ್ಸ್‌ಗಳಿಂದ 3,300 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಎಂಟು ಶತಕಗಳು ಹಾಗೂ 16 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಐಪಿಎಲ್‌ ಫ್ರಾಂಚೈಸಿಗಳ ಗಮನ ಸೆಳೆದಿರುವ ಮಹಿಪಾಲ್‌ ಲೊಮ್ರೊರ್‌

ತ್ರಿಶತಕ ಸೇರಿದಂತೆ ಪ್ರಸಕ್ತ ರಣಜಿ ಟ್ರೋಫಿ ಟೂರ್ನಿಯಲ್ಲಿ 500ಕ್ಕೂ ಹೆಚ್ಚಿನ ರನ್‌ಗಳನ್ನು ಕಲೆ ಹಾಕುವ ಮೂಲಕ ಮಹಿಪಾಲ್‌ ಲೊಮ್ರೊರ್‌ ಅವರು ತಮ್ಮ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸೇರಿದಂತೆ ಎಲ್ಲಾ ಫ್ರಾಂಚೈಸಿಗಳ ಗಮನವನ್ನು ಸೆಳೆದಿದ್ದಾರೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಿದ್ದ ಮಹಿಪಾಲ್‌ ಅವರು ರೈಟ್‌ ಟು ಮ್ಯಾಚ್‌ ಕಾರ್ಡ್‌ ಮೂಲಕ ಬೆಂಗಳೂರಿಗೆ ಮರಳಬಹುದು. 50 ಐಪಿಎಲ್‌ ಪಂದ್ಯಗಳನ್ನು ಆಡಿರುವ ಅವರು 527 ರನ್‌ಗಳನ್ನು ಕಲೆ ಹಾಕಿದ್ದಾರೆ. ಮೆಗಾ ಹರಾಜು ನವೆಂಬರ್‌ 24 ಮತ್ತು 25 ರಂದು ಸೌದಿ ಅರೇಬಿಯಾದಲ್ಲಿ ನಡೆಯಲಿದೆ.