ಬೆಂಗಳೂರು: ಟೀಮ್ ಇಂಡಿಯಾ, ಕರ್ನಾಟಕ ಮೂಲದ ಕ್ರಿಕೆಟಿಗ ಮನೀಷ್ ಪಾಂಡೆ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಚರ್ಚೆಗೆ ಕಾರಣವಾಗಿರುವುದು ದಂಪತಿಗಳ ಇನ್ಸ್ಟಾಗ್ರಾಮ್ ಖಾತೆಯ ಪೋಸ್ಟ್.
2019ರಲ್ಲಿ ಕ್ರಿಕೆಟಿಗ ಮನೀಶ್ ಪಾಂಡೆ ಚಿತ್ರನಟಿ ಆಶ್ರಿತಾ ಶೆಟ್ಟಿ ಅವರ ಕೈ ಹಿಡಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಆಶ್ರಿತಾ ಶೆಟ್ಟಿ ಅವರು ಅರ್ಜುನ್ ಕಾಪಿಕಾಡ್ ಅಭಿನಯದ ‘ತೆಲಿಕೆದ ಬೊಳ್ಳಿ’ ತುಳು ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದರು. ಇದೀಗ ಈ ಜೋಡಿ ಸದ್ಯದಲ್ಲೇ ದೂರವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.
ಮನೀಶ್ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ ತಮ್ಮ ತಮ್ಮ ಇನ್ ಸ್ಟಾಗ್ರಾಂ ಖಾತೆಗಳಲ್ಲಿ ಅಪ್ಲೋಡ್ ಮಾಡಿದ್ದ ಮದುವೆ ಮತ್ತು ಅವರಿಬ್ಬರ ಫೋಟೋಗಳನ್ನು ಇಬ್ಬರೂ ಡಿಲೀಟ್ ಮಾಡಿದ್ದಾರೆ. ಹೀಗಾಗಿ ಇವರ ದಾಂಪತ್ಯದಲ್ಲಿ ಏರುಪೇರಾಗಿದ್ದು, ಇಬ್ಬರೂ ಪರಸ್ಪರ ಬೇರೆಯಾಗುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ಮನೀಶ್ ಪಾಂಡೆ ಅವರು ಐಪಿಎಲ್ 2024ರ ಟೂರ್ನಿಯಲ್ಲಿ ತಾವು ಪ್ರತಿನಿಧಿಸಿದ್ದ ಕೆಕೆಆರ್ ತಂಡದ ಮತ್ತು ಟ್ರೋಫಿ ಜೊತೆಗಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಅವರ ಫೋಟೋಗಳ ಲಿಸ್ಟ್ ನಲ್ಲಿ ಪತ್ನಿ ಆಶ್ರಿತಾ ಜತೆಗಿರುವ ಫೋಟೋ ಮಾಯವಾಗಿದೆ.
2015ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯನ್ನಾಡುವ ಮೂಲಕ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ಮನೀಷ್, ಇದುವರೆಗೂ 29 ಏಕದಿನ ಮತ್ತು 39 ಟಿ20 ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ. ಏಕದಿನದಲ್ಲಿ 566 ರನ್ ಮತ್ತು ಟಿ20ಯಲ್ಲಿ 709 ರನ್ ಬಾರಿಸಿದ್ದಾರೆ. ಬ್ಯಾಟಿಂಗ್ ಜತೆಗೆ ಚುರುಕಿನ ಫೀಲ್ಡಿಂಗ್ಗೆ ಇವರು ಹೆಸರುವಾಸಿ.