Friday, 22nd November 2024

ಏರ್​ ಪಿಸ್ತೂಲ್ ಮಿಶ್ರ ಡಬಲ್ಸ್​ನಲ್ಲಿ ಕಂಚು ಪದಕ: ಮನು ಭಾಕರ್​, ಸರಬ್ಜೋತ್ ಸಿಂಗ್ ಸಾಧನೆ

ಪ್ಯಾರಿಸ್: ಮನು ಭಾಕರ್​ ಇದೀಗ ಮತ್ತೊಂದು ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತದ ಏಕೈಕ ಕ್ರೀಡಾಪಟು ಎನಿಸಿಕೊಂಡಿದ್ದಾರೆ. 10 ಮೀಟರ್ ಏರ್​ ಪಿಸ್ತೂಲ್ ಮಿಶ್ರ ಡಬಲ್ಸ್​ನಲ್ಲಿ ಕಂಚು ಪದಕ ಗೆದ್ದಿದ್ದಾರೆ.

ಸರಬ್ಜೋತ್​ ಸಿಂಗ್ಜೊತೆಯಲ್ಲಿ ಮಿಶ್ರ ತಂಡದ ವಿಭಾಗದಲ್ಲಿ ಕಣಕ್ಕಿಳಿದಿದ್ರು. ಇದೀಗ ಸೌತ್‌ ಕೊರಿಯಾ ವಿರುದ್ಧ ಭಾರತದ ಜೋಡಿ ಗೆದ್ದು ಬೀಗಿದೆ. ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಈ ಹಿಂದೆ 2 ಬಾರಿ ಪದಕ ಗೆದ್ದಿದ್ದಾರೆ. ಆದರೆ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ 2024 ರ ದಿನದ 4 ರಂದು ದಕ್ಷಿಣ ಕೊರಿಯಾ ವಿರುದ್ಧ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಟೀಮ್ ಶೂಟಿಂಗ್ ಸ್ಪರ್ಧೆಯಲ್ಲಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಕಂಚಿನ ಪದಕ ಪಡೆದರು. ಮನು ಭಾಕರ್​- ಸರಬ್ಜೋತ್ ಸಿಂಗ್ ಮೂರನೇ ಸ್ಥಾನ, ಕಂಚಿನ ಪದಕಕ್ಕಾಗಿ ದಕ್ಷಿಣ ಕೊರಿಯಾದ ಲೀ ವಾನ್ ಹೊ ಮತ್ತು ಯೆ-ಜಿನ್ ಅವರೊಂದಿಗೆ ಪೈಪೋಟಿ ನಡೆಸಿದರು.

ಮಹಿಳೆಯರ 10 ಮೀ. ಏರ್‌ ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ ಭಾರತದ ಹೆಮ್ಮೆಯ ಶೂಟರ್‌ ಮನು ಭಾಕರ್‌ ಕಂಚಿನ ಪದಕ ಗೆದ್ದ ಸಾಧನೆ ಮೆರೆದಿ ದ್ದಾರೆ. ಈ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ ಪದಕ ಪಟ್ಟಿಯಲ್ಲಿ ಭಾರತ ಖಾತೆ ತೆರೆದಿತ್ತು. ಫೈನಲ್‌ನಲ್ಲಿ ಕೊರಿಯಾದ ಶೂಟರ್‌ಗಳ ಎದುರು ಹಿನ್ನಡೆ ಅನುಭವಿಸಿದರೂ, ಕಂಚಿನ ಪದಕಕ್ಕೆ ಕೊರಳೊಡ್ಡುವಲ್ಲಿ ಮನು ಭಾಕರ್‌ ಸಫಲರಾದರು. ಇನ್ನೂ ಇಂದು ಕೂಡ ಕಂಚಿನ ಪದಕ ಗೆದ್ದು ಭಾರತಕ್ಕೆ 2ನೇ ಪದಕ ಗೆದ್ದು ಕೊಟ್ಟಿದ್ದಾರೆ.