Thursday, 12th December 2024

ಇಂತಹ ಕೆಳಮಟ್ಟದ ಯಾವುದೇ ತಂಡ ಅಥವಾ ಆಟಗಾರನನ್ನು ನೋಡಿಲ್ಲ: ಮ್ಯಾಥ್ಯೂಸ್​ ಅಸಮಾಧಾನ

ನವದೆಹಲಿ: ವಿಶ್ವಕಪ್ ಪಂದ್ಯದಲ್ಲಿ ‘ಟೈಮ್​ ಔಟ್​’ ನೀತಿಯಿಂದ ಎಸೆತ ಎದುರಿಸದೇ ಔಟಾದ ಶ್ರೀಲಂಕಾದ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್​ ಬಾಂಗ್ಲಾದೇಶ​ ತಂಡ ಹಾಗೂ ನಾಯಕ ಶಕೀಬ್​ ಅಲ್​ ಹಸನ್​ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಎದುರಾಳಿ ತಂಡದ ಕ್ರಮವು ನಿಸ್ಸಂಶಯವಾಗಿ ಅವಮಾನಕರವಾಗಿದೆ. ಕಳೆದ 15 ವರ್ಷಗಳ ನನ್ನ ಅಂತರರಾಷ್ಟ್ರಿಯ ಕ್ರಿಕೆಟ್​ ಆಟದಲ್ಲಿ ಇಂತಹ ಕೆಳಮಟ್ಟದ ಯಾವುದೇ ತಂಡ ಅಥವಾ ಆಟಗಾರನನ್ನು ನೋಡಿಲ್ಲ ಎಂದರು.

ಕ್ರಿಕೆಟ್​ ನಿಯಮಗಳ ಪ್ರಕಾರ, ಒಂದು ವಿಕೆಟ್ ಪತನದ ನಂತರ ಅಥವಾ ಬ್ಯಾಟರ್‌ನ ನಿವೃತ್ತಿಯ ಬಳಿಕ ಬರುವ ಬ್ಯಾಟರ್​ 2 ನಿಮಿಷಗಳಲ್ಲಿ ಮುಂದಿನ ಚೆಂಡನ್ನು ಎದುರಿಸಲು ಸಿದ್ಧರಾಗಿರಬೇಕು. ಪೂರೈಸದಿದ್ದರೆ ಆಟಗಾರ ಔಟ್​ ಎಂದು ಘೋಷಿಸಲಾಗುತ್ತದೆ. ಇದಕ್ಕೆ ‘ಟೈಮ್​ ಔಟ್’​ ಎಂದು ಕರೆಯಲಾಗು ತ್ತದೆ.

ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಆಲ್​ರೌಂಡರ್​ ಏಂಜೆಲೊ ಮ್ಯಾಥ್ಯೂಸ್ ತಮ್ಮ ಮೊದಲ ಚೆಂಡನ್ನು ಎದುರಿಸಲು ಎರಡು ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದರಿಂದ ಬಾಂಗ್ಲಾ ನಾಯಕ, ಬೌಲರ್​ ಶಕೀಬ್​ ಅಲ್​ ಹಸನ್ ಮನವಿ ಮೇರೆಗೆ ಎಸೆತ ಎದುರಿಸುವ ಮುನ್ನವೇ ಪೆವಿಲಿಯನ್‌ಗೆ ಮರಳಬೇಕಾಯಿತು. ಈ ಮೂಲಕ ಮ್ಯಾಥ್ಯೂಸ್​ ಅಂತರರಾಷ್ಟ್ರೀಯ ಕ್ರಿಕೆಟ್​ ಇತಿಹಾಸದಲ್ಲಿ ‘ಟೈಮ್​ ಔಟ್​’ಗೆ ಗುರಿಯಾದ ಮೊದಲ ಆಟಗಾರ ಎಂದೆನಿಸಿದರು.

”ಇದು ನಿಜವಾಗಿಯೂ ಶಕೀಬ್​ ಹಾಗೂ ಬಾಂಗ್ಲಾದೇಶದಿಂದ ನಡೆದ ಅವಮಾನ. ಇಂತಹ ಕೆಳಮಟ್ಟದ ವರ್ತನೆಯಿಂದ ಅವರು ವಿಕೆಟ್​ ಪಡೆಯಲು ಬಯಸಿದ್ದರೆ, ಬಾಂಗ್ಲಾದೇಶ ಆಟದ ನಡೆಯು ತುಂಬಾ ನಿರಾಶಾದಾಯಕ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

”ನಾನು ಎರಡು ನಿಮಿಷದೊಳಗೆ ಕ್ರೀಸ್​ಗೆ ಬಂದಿದ್ದೆ. ಕ್ರೀಸ್​ನಲ್ಲಿದ್ದಾಗಲೇ ಹೆಲ್ಮೆಟ್​ ಪಟ್ಟಿ ಒಡೆದಿತ್ತು. ಅಂಪೈರ್​ ಕೂಡ ಗಮನಿಸಿದರು. ಇನ್ನೂ ಐದು ಸೆಕೆಂಡ್​​ಗಳು ಬಾಕಿ ಇತ್ತು. ಬಳಿಕ ನಾನು ಹೆಲ್ಮೆಟ್​ ತೋರಿಸಿದ ನಂತರ ಅಂಪೈರ್​, ಬಾಂಗ್ಲಾದೇಶದ ಮನವಿ ಬಗ್ಗೆ ತಿಳಿಸಿದರು.

ಪಂದ್ಯದ ಬಳಿಕ ಬಾಂಗ್ಲಾದೇಶದ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ಶ್ರೀಲಂಕಾ ತಂಡ ನಿರಾಕರಿಸಿತ್ತು.