Friday, 22nd November 2024

ವಿಶ್ವಕಪ್ ಟ್ರೋಫಿಯ ಮೇಲೆ ಕಾಲುಗಳನ್ನು ಇಟ್ಟು ಮಾರ್ಷ್ ವಿಶ್ರಾಂತಿ: ನೆಟ್ಟಿಗರ ಟೀಕೆ

ಅಹಮದಾಬಾದ್: ವಿಶ್ವಕಪ್ ಟ್ರೋಫಿಯ ಮೇಲೆ ಎರಡೂ ಕಾಲುಗಳನ್ನು ಇಟ್ಟುಕೊಂಡು ಸ್ಟ್ರೇಲಿಯಾದ ಕ್ರಿಕೆಟಿಗ ಮಿಚೆಲ್ ಮಾರ್ಷ್ ವಿಶ್ರಾಂತಿ ಪಡೆಯುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಈ ಫೋಟೋವನ್ನು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಗೆದ್ದ ಸಂಭ್ರಮದಲ್ಲಿ ಕಪ್ ಮೇಲೆ ಕಾಲಿಟ್ಟು ದುರ್ವರ್ತನೆ ಮೆರೆದಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದ ಕೆಲವೇ ಗಂಟೆಗಳ ನಂತರ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ನ.19 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಆತಿಥೇಯ ಭಾರತವನ್ನು ಎದುರಿಸಿತು. ಆಸ್ಟ್ರೇಲಿಯಾ ತಂಡವು ಆರಾಮವಾಗಿ ಕುಳಿತು ಪರಸ್ಪರ ಮಾತನಾಡುತ್ತಿದ್ದ ಹೋಟೆಲ್ ಕೋಣೆಯಿಂದ ಈ ಫೋಟೋ ಹೊರ ಬಂದಿದೆ. ಚಿತ್ರ ವೈರಲ್ ಆದ ಕೂಡಲೇ, ಟ್ರೋಫಿಗೆ ‘ಅಗೌರವ’ ತೋರಿದ ಆಟಗಾರನನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಮುಗ್ಗರಿಸಿದ್ದು, ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೋಲು ಕಂಡಿದೆ.