ಹೈದರಾಬಾದ್: ಟೀಮ್ ಇಂಡಿಯಾದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್(Mithali Raj) ಅವರು ಆಂಧ್ರ ಕ್ರಿಕೆಟ್ ಸಂಸ್ಥೆಯ(Andhra Cricket Association) ಮಹಿಳೆಯರ ಕ್ರಿಕೆಟ್ ಕಾರ್ಯಾಚರಣೆಯ ಸಲಹೆಗಾರ್ತಿಯಾಗಿ ನೇಮಕಗೊಂಡಿದ್ದಾರೆ.
ರಾಜ್ಯದಾದ್ಯಂತ ಯುವ ಪ್ರತಿಭೆಗಳನ್ನು ಹುಡುಕುವ ನಿರ್ದಿಷ್ಟ ಉದ್ದೇಶದೊಂದಿಗೆ ಮಿಥಾಲಿ ನಮ್ಮೊಂದಿಗೆ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಆಂಧ್ರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಎಸ್.ಸತೀಶ್ ಬಾಬು ಹೇಳಿದ್ದಾರೆ. ನಾವು ಮಹಿಳಾ ಕ್ರಿಕೆಟಿಗರಿಗಾಗಿ ಅನಂತಪುರದಲ್ಲಿ ಪೂರ್ಣ ಪ್ರಮಾಣದ ಹೈ ಪರ್ಫಾರ್ಮೆನ್ಸ್ ಅಕಾಡೆಮಿಯನ್ನು ಸ್ಥಾಪಿಸುತ್ತಿದ್ದೇವೆ. ಆರಂಭದಲ್ಲಿ ನಾವು ವಿವಿಧ ವಯೋಮಾನದ 80 ಬಾಲಕಿಯರನ್ನು ಆಯ್ಕೆ ಮಾಡುತ್ತೇವೆ. 365 ದಿನಗಳ ತರಬೇತಿಯನ್ನು ನೀಡುತ್ತೇವೆ ಎಂದು ಸತೀಶ್ ಬಾಬು(ACA Secretary S. Satish Babu) ಹೇಳಿದ್ದಾರೆ.
ಭಾರತ ತಂಡವು ಕೆಲವು ಪ್ರತಿಭಾವಂತ ಯುವ ಆಟಗಾರರ ಸಮರ್ಥ ಕೈಯಲ್ಲಿದೆ ಮತ್ತು ಭಾರತೀಯ ಕ್ರಿಕೆಟ್ನ ಭವಿಷ್ಯವು ಉಜ್ವಲವಾಗಿದೆ. ಆಂಧ್ರ ಕ್ರಿಕೆಟ್ ಸಂಸ್ಥೆಯ ಮಹಿಳೆಯರ ಕ್ರಿಕೆಟ್ ಕಾರ್ಯಾಚರಣೆಯ ಸಲಹೆಗಾರ್ತಿಯಾಗಿ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಹಲವು ಪ್ರತಿಭೆಯನ್ನು ಬೆಳಕಿಗೆ ತರುವ ವಿಶ್ವಾಸವಿದೆ ಎಂದು ಮಿಥಾಲಿ ಹೇಳಿದರು.
2022ರಲ್ಲಿ ಮಿಥಾಲಿ ರಾಜ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಮಾದರಿಗಳಿಗೆ ನಿವೃತ್ತಿ ಘೋಷಿಸಿದ್ದರು. 41ರ ಹರೆಯದ ಭಾರತೀಯ ಟೆಸ್ಟ್ ಮತ್ತು ಏಕದಿನ ತಂಡದ ನಾಯಕಿ ಮಿಥಾಲಿ 1999 ರಲ್ಲಿ ಪಾದಾರ್ಪಣೆ ಮಾಡಿದ್ದರು. 23 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಅಂತಾಷ್ಟ್ರೀಯ ವೃತ್ತಿಜೀವನದಲ್ಲಿ 232 ಏಕದಿನ , 89 ಟಿ 20 ಮತ್ತು 12 ಟೆಸ್ಟ್ಗಳಲ್ಲಿ ಆಡಿದ್ದಾರೆ.
ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಏಕದಿನ ಪಂದ್ಯಗಳಲ್ಲಿ 7 ಶತಕಗಳು ಮತ್ತು 64 ಅರ್ಧಶತಕಗಳೊಂದಿಗೆ 7805 ರನ್ಗಳನ್ನು,ಟಿ 20 ಯಲ್ಲಿ 17 ಅರ್ಧಶತಕಗಳೊಂದಿಗೆ 2,364 ರನ್ಗಳು ಮತ್ತು ಟೆಸ್ಟ್ ನಲ್ಲಿ 699 ರನ್ಗಳನ್ನು ಗಳಿಸಿದ್ದಾರೆ.