Thursday, 12th December 2024

ಗೆಲುವಿನ ಹಳಿಯೇರಿದ ಮಿಥಾಲಿ ಪಡೆ

ವೂರ್ಸ್ಟರ್: ಅಂತಿಮ ಏಕದಿನ ಪಂದ್ಯವನ್ನು ನಾಲ್ಕು ವಿಕೆಟ್ ಅಂತರದಿಂದ ಗೆದ್ದ ಮಿಥಾಲಿ ರಾಜ್ ಬಳಗ ವೈಟ್ ವಾಶ್ ಅವಮಾನದಿಂದ ಪಾರಾಗಿದೆ. ಸತತ ಸೋಲಿನ ಬಳಿಕ ತಂಡ ಇಂಗ್ಲೆಂಡ್ ವನಿತೆಯರ ವಿರುದ್ಧದ ಗೆಲುವಿನ ಹಳಿಯೇರಿದೆ.

ಮಳೆಯಿಂದಾಗಿ, 47 ಓವರ್ ಗಳಿಗೆ ಸೀಮಿತವಾದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿತು. ಖಾತೆ ತೆರೆಯದ ಟಾಮಿ ಬ್ಯೂಮಂಟ್‌ ಅವರನ್ನು ಶಿಖಾ ಪಾಂಡೆ ದ್ವಿತೀಯ ಓವರ್‌ನಲ್ಲೇ ಪೆವಿಲಿಯನ್ನಿಗೆ ಕಳುಹಿಸಿದರು. ಆದರೆ ಲಾರೆನ್‌ ವಿನ್‌ಫೆಲ್ಡ್‌ ಹಿಲ್‌ (36), ನಾಯಕಿ ಹೀತರ್‌ (46) 67 ರನ್‌ ಜತೆಯಾಟ ನಡೆಸಿ ತಂಡದ ರಕ್ಷಣೆಗೆ ನಿಂತರು. 49 ರನ್‌ ಮಾಡಿದ ನಥಾಲಿ ಶಿವರ್‌ ಇಂಗ್ಲೆಂಡ್‌ ಸರದಿಯ ಟಾಪ್‌ ಸ್ಕೋರರ್‌. ಅಂತಿಮವಾಗಿ 47 ಓವರ್ ನಲ್ಲಿ ಇಂಗ್ಲೆಂಡ್ 219 ರನ್ ಗೆ ಆಲ್ ಔಟ್ ಆಯಿತು. ಭಾರತದ ಪರ ದೀಪ್ತಿ ಶರ್ಮ 47ಕ್ಕೆ 3 ವಿಕೆಟ್‌ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು. ಐದೂ ಬೌಲರ್ ಒಂದೊಂದು ವಿಕೆಟ್‌ ಕಿತ್ತರು.

ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ಮೊದಲ ವಿಕೆಟ್ ಗೆ ಶಫಾಲಿ- ಸ್ಮೃತಿ 46 ರನ್ ಗಳಿಸಿದರು. ದೊಡ್ಡ ಹೊಡೆತಕ್ಕೆ ಮುಂದಾದ ಶಫಾಲಿ 19 ರನ್ ಗಳಿಸಿ ಔಟಾದರು. 49 ರನ್ ಗಳಿಸಿದ್ದ ಸ್ಮ್ರತಿ ಮಂಧನಾ ಎಲ್ ಬಿ ಬಲೆಗೆ ಬಿದ್ದರು. ಅರ್ಧಶತಕ ಸಿಡಿಸಿದ ನಾಯಕಿ ಮಿಥಾಲಿ ರಾಜ್ ಅಜೇಯ ಆಟವಾಡಿದರು. ಹರ್ಮನ್ 16 ರನ್, ದೀಪ್ತಿ 18 ರನ್ ಮತ್ತು ಸ್ನೇಹ್ ರಾಣಾ ಉಪಯುಕ್ತ 24 ರನ್ ಗಳಿಸಿದರು. ಆರು ವಿಕೆಟ್ ಕಳೆದುಕೊಂಡ ಭಾರತ ತಂಡ ಮೂರು ಎಸೆತ ಬಾಕಿ ಇರುವಂತೆ ಜಯ ಗಳಿಸಿತು.

ಮಿಥಾಲಿ ರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸೋಫಿಯಾ ಎಕ್ಲೆಸ್ಟೋನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.