Friday, 22nd November 2024

ಹಾಕಿ ತಂಡದ ಮುಖ್ಯ ಕೋಚ್ ಆಗಿ ಲಾಲ್‌ರೆಮ್ಸಿಯಾಮಿ ನೇಮಕ

ಐಜ್ವಾಲ್‌: ಭಾರತ ಮಹಿಳಾ ಹಾಕಿ ತಂಡದ ಸದಸ್ಯೆ ಲಾಲ್‌ರೆಮ್ಸಿಯಾಮಿ ಅವರನ್ನು ಮಿಜೋರಾಂ ಸರ್ಕಾರವು ರಾಜ್ಯ ಹಾಕಿ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ.

ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳೆಯರ ತಂಡದವರು ಸೆಮಿಫೈನಲ್ ಪ್ರವೇಶಿಸಿದ ಐತಿಹಾಸಿಕ ಸಾಧನೆ ಮಾಡಿದ್ದರು. ಲಾಲ್‌ರೆಮ್ಸಿಯಾಮಿ, ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಮಿಜೋರಾಂನ ಮೊದಲ ಮಹಿಳೆ ಆಗಿದ್ದಾರೆ.

ಲಾಲ್‌ರೆಮ್ಸಿಯಾಮಿ ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆಯಲ್ಲಿ ‘ಎ’ ದರ್ಜೆಯ ಉದ್ಯೋಗ ನೀಡಲು ನಿರ್ಧರಿಸಲಾಗಿತ್ತು. ಇದು, ಸಹಾಯಕ ನಿರ್ದೇಶಕರ ಮಟ್ಟದ ಹುದ್ದೆಯಾಗಿದೆ. ಲಾಲ್‌ರೆಮ್ಸಿಯಾಮಿ ಅವರಿಗೆ ಕೊಲಾಸಿಬ್‌ನಲ್ಲಿ ಮನೆ ನಿರ್ಮಿಸಲು ಜಾಗವನ್ನೂ ಸರ್ಕಾರ ನೀಡಿದೆ.

ಕೋಚ್ ಆಗಿ ನೇಮಕ ಮಾಡಿರುವ ವಿಷಯವನ್ನು ಮುಖ್ಯಮಂತ್ರಿ ಜೊರಾಮ್‌ತಾಂಗ ಅವರು ಅಧಿಕೃತ ಟ್ವಿಟರ್ ಖಾತೆಯಲ್ಲಿ ಗುರುವಾರ ರಾತ್ರಿ ಬಹಿರಂಗ ಮಾಡಿದ್ದಾರೆ. ಒಲಿಂಪಿಕ್ಸ್‌ನಿಂದ ವಾಪಸ್ ಆದ ತಕ್ಷಣ ಲಾಲ್‌ರೆಮ್ಸಿ ಯಾಮಿ ಅವರಿಗೆ ಸರ್ಕಾರ ₹ 25 ಲಕ್ಷವನ್ನು ನೀಡಿತ್ತು. ಜೂನ್ 24ರಂದು ಅವರ ತಾಯಿ ಲಾಲ್‌ಜರ್ಮಾವಿ ಅವರಿಗೆ ₹ 10 ಲಕ್ಷ ನೀಡಲಾಗಿತ್ತು.

ಲಾಲ್‌ರೆಮ್ಸಿಯಾಮಿ ಆ.25ರಂದು ಮಿಜೋರಾಂಗೆ ಬರಲಿದ್ದು ಐಜ್ವಾಲ್‌ನ ವನಾಪ ಸಭಾಂಗಣದಲ್ಲಿ 26ರಂದು ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಗುವುದು ಎಂದು ರಾಜ್ಯ ಕ್ರೀಡಾ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.