Thursday, 19th September 2024

Mohammed Shami: 34ನೇ ವಸಂತಕ್ಕೆ ಕಾಲಿಟ್ಟ ಟೀಮ್‌ ಇಂಡಿಯಾ ವೇಗಿ ಮೊಹಮ್ಮದ್‌ ಶಮಿ

Mohammed Shami

ಕೋಲ್ಕತ್ತಾ: ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದ ಟೀಮ್‌ ಇಂಡಿಯಾದ ಸ್ಟಾರ್‌ ವೇಗಿ ಮೊಹಮ್ಮದ್‌ ಶಮಿ(Mohammed Shami) ಅವರಿಗೆ ಇಂದು 34ನೇ ವರ್ಷದ ಹುಟ್ಟು ಹಬ್ಬದ(Happy Birthday Mohammed Shami) ಸಂಭ್ರಮ. ಸೆಪ್ಟೆಂಬರ್‌ 3, 1990ರಲ್ಲಿ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಜನಿಸಿದ ಶಮಿ 2013ರಲ್ಲಿ ಪಾಕಿಸ್ತಾನ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಶಮಿಗೆ  ಬಿಸಿಸಿಐ, ಗುಜರಾತ್‌ ಜೈಂಟ್ಸ್‌ ಸೇರಿ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳು, ಹಾಲಿ ಮತ್ತು ಮಾಜಿ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಹರಸಿ ಹಾರೈಸಿದ್ದಾರೆ.

ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಶಮಿ ಆಡಿದ  7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 2 ಬಾರಿ ಹ್ಯಾಟ್ರಿಕ್‌ ವಿಕೆಟ್‌ ಕಿತ್ತ ದಾಖಲೆಯೂ ಶಮಿ ಹೆಸರಿನಲ್ಲಿದೆ. ಒಟ್ಟಾರೆಯಾಗಿ ಶಮಿ ಭಾರತ ಪರ 188 ಅಂತಾರಾಷ್ಟ್ರೀಯ ಪಂದ್ಯವನ್ನಾಡಿ 448 ವಿಕೆಟ್‌ ಕೆಡವಿದ್ದಾರೆ.

https://x.com/BCCI/status/1830810448519721228

ಹಿಮ್ಮಡಿಯ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಶಮಿ ಏಕದಿನ ವಿಶ್ವಕಪ್‌ ಬಳಿಕ ಯಾವುದೇ ಕ್ರಿಕೆಟ್​ ಟೂರ್ನಿ ಆಡಿಲ್ಲ. ಸದ್ಯ ಬೆಂಗಳೂರಿನ ಎನ್​ಸಿಯಲ್ಲಿ ಪುನಶ್ಚೇತನ ಮತ್ತು ಫಿಟ್‌ನೆಸ್‌ ಆರೈಕೆಯಲ್ಲಿರುವ ಶಮಿ ಅಕ್ಟೋಬರ್‌ ತಿಂಗಳಲ್ಲಿ ಶುರುವಾಗಲಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುವ ಸಾಧ್ಯತೆ ಇದೆ. ಉತ್ತರ ಪ್ರದೇಶ (ಅ.11ರಿಂದ) ಮತ್ತು ಬಿಹಾರ (ಅ. 18ರಿಂದ)ವಿರುದ್ಧದ ಪಂದ್ಯಗಳಲ್ಲಿ ಅವರು ಆಡುಬಹುದು. ಈಗಾಗಲೇ ಬಂಗಾಳ ತಂಡದ 31 ಸದಸ್ಯರ ಸಂಭಾವ್ಯರ ಪಟ್ಟಿಯಲ್ಲಿ ಶಮಿ ಹೆಸರು ಕಂಡುಬಂದಿದೆ. ಹೀಗಾಗಿ ಅವರು ಆಡುವುದು ಬಹುತೇಕ ಖಚಿತ ಎನ್ನಲಾಗಿದೆ.

ಶಮಿ ಯಾವ ಸರಣಿಯನ್ನಾಡುವ ಮೂಲಕ ಭಾರತ ತಂಡಕ್ಕೆ ಸೇರಲಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿದು ಬಾರದಿದ್ದರೂ, ಮೂಲಗಳ ಪ್ರಕಾರ ಶಮಿ ಈ ವರ್ಷದ ಕೊನೆಯಲ್ಲಿ ನಡೆಯುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿತಂಡ ಸೇರಲಿದ್ದಾರೆ ಎನ್ನಲಾಗಿದೆ. ಈ ಸರಣಿಯನ್ನಾಡುವ ಮುನ್ನ ಭಾರತ ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್‌ ವಿರುದ್ಧ ಸರಣಿಯನ್ನಾಡಲಿದೆ. ಶಮಿ ಆಸ್ಟ್ರೇಲಿಯಾದಲ್ಲಿ ಉತ್ತಮ ಟೆಸ್ಟ್ ದಾಖಲೆಯನ್ನು ಹೊಂದಿದ್ದಾರೆ, ಎಂಟು ಪಂದ್ಯಗಳಲ್ಲಿ 32.16 ಸರಾಸರಿಯಲ್ಲಿ 6/56 ರ ಅತ್ಯುತ್ತಮ ಅಂಕಿ ಅಂಶಗಳೊಂದಿಗೆ 31 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ಐದು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. ಮುಂದಿನ ವರ್ಷ ಚಾಂಪಿಯನ್ಸ್​ ಟ್ರೋಫಿ ಕೂಡ ನಡೆಯುವ ಕಾರಣ ಶಮಿ ಅವರ ಪಾತ್ರ ನಿರ್ಣಾಯಕ ಹೀಗಾಗಿ ಬಿಸಿಸಿಐ ಶಮಿಯನ್ನು ಆತುರದಿಂದ ಆಡಿಸಲು ಮುಂದಾಗುವುದು ಅನುಮಾನ. ಸಂಪೂರ್ಣ ಚೇತರಿಕೆಯ ಬಳಿಕವೇ ಅವರಿಗೆ ಆಡುವ ಅವಕಾಶ ಕಲ್ಪಿಸಬಹುದು.