ಬೆಂಗಳೂರು: ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ವೇಗಿ ಮೊಹಮದ್ ಶಮಿ(Mohammed Shami) ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗಾವಸ್ಕರ್ ಟ್ರೋಫಿಯ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಈಗಲೇ ಪರಿಗಣಿಸುವುದು ಕಠಿಣ ನಿರ್ಧಾರವಾಗಿದೆ ಎಂದು ಕಿವೀಸ್ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ನಾಯಕ ರೋಹಿತ್ ಶರ್ಮ ಹೇಳಿದ್ದರು. ಇದೀಗ ಶಮಿ ಬೌಲಿಂಗ್ ಅಭ್ಯಾಸ ನಡೆಸುವ ಮೂಲಕ ಆಸೀಸ್ ಸರಣಿ ವೇಳೆ ತಂಡ ಸೇರುವ ನಿರೀಕ್ಷೆಯಲ್ಲಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಪುನಶ್ಚೇತನ ಶಿಬಿರದಲ್ಲಿರುವ ಶಮಿ ವೈದ್ಯರ ನಿಗಾದಲ್ಲಿದ್ದು, ಫಿಟ್ನೆಸ್‌ಗಾಗಿ ಶ್ರಮಿಸುತ್ತಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ ಚಿನ್ನಸ್ವಾಮಿಯಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಶಮಿ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್(bowling coach Morne Morkel) ಮಾರ್ಗದರ್ಶನದಲ್ಲಿ ಶುಭಮನ್ ಗಿಲ್ ಸೇರಿ ಭಾರತ ತಂಡ ಬ್ಯಾಟರ್‌ಗಳಿಗೆ ನೆಟ್ಸ್‌ನಲ್ಲಿ ಬೌಲಿಂಗ್ ನಡೆಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಸ್ಟ್ರೇಲಿಯಾ ಪ್ರವಾಸಕ್ಕೆ ಮುನ್ನ ಶಮಿ ಶೇ.100 ಫಿಟ್ ಆಗಬೇಕು ಎಂಬುದು ತಂಡದ ಬಯಕೆಯಾಗಿತ್ತು. ಆದರೆ ಇತ್ತೀಚೆಗೆ ಅವರು ಮೊಣಕಾಲಿನ ಊತದಿಂದ ಬಳಲುತ್ತಿದ್ದು, ಇದು ಶಮಿ ಅವರ ಪುನರಾಗಮನಕ್ಕೂ ಅಡ್ಡಿಯಾಗಿದೆ. ಪಾದದ ಶಸ ಚಿಕಿತ್ಸೆಯ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದ ಶಮಿ ಬೌಲಿಂಗ್ ಅಭ್ಯಾಸವನ್ನೂ ಆರಂಭಿಸಿದ್ದರು. ಆಗ ಮೊಣಕಾಲಿನಲ್ಲಿ ಊತ ಕಂಡುಬಂದಿತ್ತು. ಸದ್ಯ ಶಮಿ ಚೇತರಿಸಿಕೊಂಡಂತೆ ಕಾಣಿಸಿದರೂ ಕಾಲಿಗೆ ನೋವು ನಿವಾರಕ ಬ್ಯಾಡೆಂಜ್ ಸುತ್ತಿಕೊಂಡಿದ್ದಾರೆ.
ಇದನ್ನೂ ಓದಿ IND vs NZ: ಮೂರು ಗಂಟೆ ಹೊರತುಪಡಿಸಿ ನಾವು ಉತ್ತಮ ಟೆಸ್ಟ್ ಆಡಿದ್ದೇವೆ; ರೋಹಿತ್ ಪ್ರತಿಕ್ರಿಯೆ
ಪೂರ್ತಿ ಫಿಟ್‌ನೆಸ್ ಹೊಂದಿರದ ಕಾರಣ ಅವರನ್ನು ಅವಸರದಲ್ಲಿ ಪಂದ್ಯವನ್ನಾಡಿಸಿ ಮತ್ತೆ ಗಾಯಗೊಂಡರೆ ಕಷ್ಟ ಎನ್ನುವುದು ಬಿಸಿಸಿಐ ಲೆಕ್ಕಾಚಾರ. ಆದ್ದರಿಂದ ಅವರ ಮೇಲೆ ಬಿಸಿಸಿಐ ನಿಗಾ ಇರಿಸಿದೆ. ಶಮಿ ಭಾರತದಲ್ಲೇ ನಡೆದಿದ್ದ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿ ಬಳಿಕ ಯಾವುದೇ ಕ್ರಿಕೆಟ್ ಸರಣಿ ಆಡಿಲ್ಲ. ವಿಶ್ವ ಕಪ್ ಬಳಿಕ ಶಮಿ ಲಂಡನ್‌ನಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಈ ಹಿಂದಿನ ಎರಡೂ ಆಸ್ಟ್ರೇಲಿಯಾ ಪ್ರವಾಸದಲ್ಲಿಯೂ ಭಾರತ ತಂಡ ಗೆಲುವು ಸಾಧಿಸಿ ಆಸೀಸ್ ಪಡೆಯ ಸೊಕ್ಕಡಗಿಸಿದ್ದರು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಭಾರತ ಬಲಿಷ್ಠ ತಂಡವನ್ನೇ ಸಿದ್ಧಪಡಿಸುವ ಯೋಜನೆಯ್ಲಿದೆ. ಶಮಿ ಆಸ್ಟ್ರೇಲಿಯಾದಲ್ಲಿ ಉತ್ತಮ ಟೆಸ್ಟ್ ದಾಖಲೆಯನ್ನು ಹೊಂದಿದ್ದಾರೆ, ಎಂಟು ಪಂದ್ಯಗಳಲ್ಲಿ 32.16 ಸರಾಸರಿಯಲ್ಲಿ 6/56 ರ ಅತ್ಯುತ್ತಮ ಅಂಕಿ ಅಂಶಗಳೊಂದಿಗೆ 31 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ಐದು ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.