Thursday, 12th December 2024

Mohammed Shami: ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ಸನಿಹದಲ್ಲಿ ಶಮಿ; ಈ ಟೂರ್ನಿಯಲ್ಲಿ ಕಣಕ್ಕೆ

Mohammed Shami

ಮುಂಬಯಿ: ಭಾರತ ತಂಡದ ಸ್ಟಾರ್‌ ವೇಗಿ ಮೊಹಮ್ಮದ್‌ ಶಮಿ (Mohammed Shami) ಅವರ ಕ್ರಿಕೆಟ್‌ ಕಮ್‌ಬ್ಯಾಕ್‌ಗೆ ವೇದಿಕೆಯೊಂದು ರೆಡಿಯಾಗಿದೆ. ಮುಂಬರುವ ರಣಜಿ ಟ್ರೋಫಿ(ranji trophy) ಟೂರ್ನಿಗೆ ಪ್ರಕಟಗೊಂಡಿರುವ ಬಂಗಾಳ ತಂಡದ 31 ಸದಸ್ಯರ ಸಂಭಾವ್ಯರ ಪಟ್ಟಿಯಲ್ಲಿ ಶಮಿ ಹೆಸರು ಕಂಡುಬಂದಿದೆ.

ಕಳೆದ ವರ್ಷ ನಡೆದಿದ್ದ ಏಕದಿನ ಕ್ರಿಕೆಟ್​ ಟೂರ್ನಿಯ ಬಳಿಕ ಹಿಮ್ಮಡಿಯ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಶಮಿ ಯಾವುದೇ ಕ್ರಿಕೆಟ್​ ಟೂರ್ನಿ ಆಡಿಲ್ಲ. ಸದ್ಯ ಬೆಂಗಳೂರಿನ ಎನ್​ಸಿಯಲ್ಲಿ ಪುನಶ್ಚೇತನ ಮತ್ತು ಫಿಟ್‌ನೆಸ್‌ ಆರೈಕೆಯಲ್ಲಿರುವ ಶಮಿ ಅಕ್ಟೋಬರ್‌ ತಿಂಗಳಲ್ಲಿ ಶುರುವಾಗಲಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಉತ್ತರ ಪ್ರದೇಶ (ಅ.11ರಿಂದ) ಮತ್ತು ಬಿಹಾರ (ಅ. 18ರಿಂದ)ವಿರುದ್ಧದ ಪಂದ್ಯಗಳಲ್ಲಿ ಆಡುವ ಮೂಲಕ ಭಾರತ ತಂಡಕ್ಕೆ ಕಮ್​ಬ್ಯಾಕ್​ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಶಮಿ ಇನ್ನೂ ಫಿಟ್​ನೆಸ್​ ಕ್ಲೀಯರೆನ್ಸ್​ ಪಡೆಯದ ಕಾರಣ ಮುಂದಿನ ತಿಂಗಳು 5ರಿಂದ ಆರಂಭಗೊಳ್ಳಲಿರುವ ದುಲೀಪ್‌ ಟ್ರೋಫಿಗೂ ಆಯ್ಕೆ ಮಾಡಲಿಲ್ಲ.

ಶಮಿ ಯಾವ ಸರಣಿಯನ್ನಾಡುವ ಮೂಲಕ ಭಾರತ ತಂಡಕ್ಕೆ ಸೇರಲಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿದು ಬಾರದಿದ್ದರೂ, ಮೂಲಗಳ ಪ್ರಕಾರ ಶಮಿ ಈ ವರ್ಷದ ಕೊನೆಯಲ್ಲಿ ನಡೆಯುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿತಂಡ ಸೇರಲಿದ್ದಾರೆ ಎನ್ನಲಾಗಿದೆ. ಈ ಸರಣಿಯನ್ನಾಡುವ ಮುನ್ನ ಭಾರತ ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್‌ ವಿರುದ್ಧ ಸರಣಿಯನ್ನಾಡಲಿದೆ.

https://x.com/MdShami11/status/1815771754339741970

ಶಮಿ ಆಸ್ಟ್ರೇಲಿಯಾದಲ್ಲಿ ಉತ್ತಮ ಟೆಸ್ಟ್ ದಾಖಲೆಯನ್ನು ಹೊಂದಿದ್ದಾರೆ, ಎಂಟು ಪಂದ್ಯಗಳಲ್ಲಿ 32.16 ಸರಾಸರಿಯಲ್ಲಿ 6/56 ರ ಅತ್ಯುತ್ತಮ ಅಂಕಿ ಅಂಶಗಳೊಂದಿಗೆ 31 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ಐದು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. ಮುಂದಿನ ವರ್ಷ ಚಾಂಪಿಯನ್ಸ್​ ಟ್ರೋಫಿ ಕೂಡ ನಡೆಯುವ ಕಾರಣ ಶಮಿ ಅವರ ಪಾತ್ರ ನಿರ್ಣಾಯಕ ಹೀಗಾಗಿ ಬಿಸಿಸಿಐ ಶಮಿಯನ್ನು ಆತುರದಿಂದ ಆಡಿಸಲು ಮುಂದಾಗುವುದು ಅನುಮಾನ. ಸಂಪೂರ್ಣ ಚೇತರಿಕೆಯ ಬಳಿಕವೇ ಅವರಿಗೆ ಆಡುವ ಅವಕಾಶ ಕಲ್ಪಿಸಬಹುದು.

34 ವರ್ಷದ ಶಮಿ ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.