Friday, 22nd November 2024

ಆಸೀಸ್‌ ಸರಣಿಗೆ ಮೊಹಮ್ಮದ್ ಶಮಿ ಅಲಭ್ಯ, ಸಿರಾಜ್‌ಗೆ ಸ್ಥಾನ

ಅಡಿಲೇಡ್: ಭಾರತ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ, ಸರಣಿಯಲ್ಲಿ ಉಳಿದಿರುವ ಪಂದ್ಯಗಳಿಗೆ ಲಭ್ಯರಾಗುವುದು ಅನುಮಾನವೆನಿಸಿದೆ.

ಅಡಿಲೇಡ್‌ನಲ್ಲಿ ಓವಲ್‌ನಲ್ಲಿ ಶನಿವಾರ ಅಂತ್ಯಗೊಂಡ ಮೊದಲ ಹೊನಲು-ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಮೊಹಮ್ಮದ್ ಶಮಿ ಮುಂಗೈಗೆ ಗಾಯ ಮಾಡಿಕೊಂಡಿದ್ದರು.

ಪ್ಯಾಟ್ ಕಮಿನ್ಸ್ ಎಸೆದ ಶಾರ್ಟ್ ದಾಳಿಯನ್ನು ಎದುರಿಸುವಲ್ಲಿ ವಿಫಲರಾಗಿದ್ದ ಮೊಹಮ್ಮದ್ ಶಮಿ ಮುಂಗೈಗೆ ಗಾಯ ಮಾಡಿ ಕೊಂಡರು. ಅಲ್ಲದೆ ಬ್ಯಾಟಿಂಗ್ ಮುಂದುವರಿಸಲಾಗದೇ ನಿವೃತ್ತಿ ಹೊಂದಿದರು.

ಇದರೊಂದಿಗೆ ಭಾರತ 36 ರನ್ನಿಗೆ ಆಲೌಟ್ ಆಗುವುದರೊಂದಿಗೆ, ತನ್ನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿ ಕನಿಷ್ಠ ರನ್ನಿಗೆ ಪತನಗೊಂಡಿತ್ತು. ಬಿಸಿಸಿಐ ಮೂಲಗಳು, ಆಸ್ಪತ್ರೆಯಲ್ಲಿ ನಡೆಸಿದ ಸ್ಕ್ಯಾನಿಂಗ್‌ನಲ್ಲಿ ಮೊಹಮ್ಮದ್ ಶಮಿ ಮುಂಗೈಯಲ್ಲಿ ಫ್ರಾಕ್ಚರ್ ಕಂಡುಬಂದಿದ್ದು, ಸರಣಿಯ ಉಳಿದಿರುವ ಪಂದ್ಯಗಳಿಗೆ ಲಭ್ಯರಾಗುವುದು ಅನುಮಾನವೆನಸಿದೆ ಎಂದಿದೆ.

ಮೊಹಮ್ಮದ್ ಶಮಿ ಸ್ಥಾನವನ್ನು ಯುವ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ತುಂಬುವ ಸಾಧ್ಯತೆಯಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ ಕೂಡಾ ಪಿತೃತ್ವ ರಜೆಯಲ್ಲಿ ತಾಯ್ನಾಡಿಗೆ ಮರಳಲಿದ್ದಾರೆ. ಇವೆಲ್ಲವೂ ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯಾಗಿದೆ.

ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ಬಾರಿಸಿರುವ ಆಸ್ಟ್ರೇಲಿಯಾ, 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಡಿ.26ರಂದು ಆರಂಭವಾಗಲಿದೆ.