69 ವರ್ಷಗಳ ಬಳಿಕ ಮಧ್ಯ ಪ್ರದೇಶ ತಂಡವು ರಣಜಿ ಕಿರೀಟವನ್ನು ತನ್ನ ದಾಗಿಸಿಕೊಂಡು ಹೊಸ ಇತಿಹಾಸ ಬರೆದಿದೆ. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಸರ್ಫರಾಜ್ ಖಾನ್ (134) ಅವರ ಶತಕದ ನೆರವಿನಿಂದ 374 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಮಧ್ಯ ಪ್ರದೇಶ ತಂಡದ ಪರ ಯಶ್ ದುಬೆ (133) ಶುಭಂ ಶರ್ಮಾ (116) ಹಾಗೂ ರಜತ್ ಪಾಟಿದಾರ್ (122) ಶತಕ ಸಿಡಿಸಿ ಅಬ್ಬರಿಸಿದ್ದರು. ಪರಿಣಾಮ ಮಧ್ಯ ಪ್ರದೇಶ ತಂಡವು ಮೊದಲ ಇನಿಂಗ್ಸ್ನಲ್ಲಿ 536 ರನ್ ಕಲೆ ಹಾಕಿತು.
162 ರನ್ಗಳ ಹಿನ್ನಡೆಯೊಂದಿಗೆ 4ನೇ ದಿನದಾಟದ ಅಂತ್ಯದಲ್ಲಿ 2ನೇ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡಕ್ಕೆ ನಾಯಕ ಪೃಥ್ವಿ ಶಾ ಸ್ಪೋಟಕ ಆರಂಭ ಒದಗಿಸಿ ದ್ದರು. ಹಾರ್ದಿಕ್ ತಮೊರೆ ಜೊತೆಗೂಡಿ ಬ್ಯಾಟ್ ಬೀಸಿದ ಪೃಥ್ವಿ 10 ಓವರ್ಗಳಲ್ಲಿ ತಂಡದ ಮೊತ್ತವನ್ನು 60 ರ ಗಡಿದಾಟಿಸಿದರು. 25 ರನ್ಗಳಿಸಿ ತಮೊರೆ ಔಟಾ ದರೆ, ಇದರ ಬೆನ್ನಲ್ಲೇ 52 ಎಸೆತಗಳಲ್ಲಿ 44 ರನ್ಗಳಿಸಿದ್ದ ವೇಳೆ ಪೃಥ್ವಿ ಶಾ ಕೂಡ ವಿಕೆಟ್ ಒಪ್ಪಿಸಿದರು.
ಬಳಿಕ ಅರ್ಮಾನ್ ಜಾಫರ್ (37), ಸವೇದ್ ಪಾರ್ಕರ್ (51) ಹಾಗೂ ಸರ್ಫರಾಜ್ ಖಾನ್ (45) ಬಿರುಸಿನ ಇನಿಂಗ್ಸ್ ಆಡಿದ್ದರು. 5ನೇ ದಿನದಾಟದ ವೇಳೆ 269 ರನ್ಗಳಿಗೆ ಸರ್ವಪತನ ಕಂಡಿತು. ಅದರಂತೆ 2ನೇ ಇನಿಂಗ್ಸ್ನಲ್ಲಿ 108 ರನ್ಗಳ ಟಾರ್ಗೆಟ್ ಪಡೆದ ಮಧ್ಯ ಪ್ರದೇಶ ತಂಡಕ್ಕೆ ಹಿಮಾಂಶು ಮಂತ್ರಿ ಹಾಗೂ ಶುಭಂ ಶರ್ಮಾ ಎಚ್ಚರಿಕೆಯ ಆಟವಾಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಅರ್ಧಶತಕಗಳ ಜೊತೆಯಾಟದ ಬಳಿಕ ಹಿಮಾಂಶು ಮಂತ್ರಿ (37) ಶಮ್ಸ್ ಮುಲಾನಿಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಯಾದ ಶುಭಂ ಶರ್ಮಾ ಹಾಗೂ ರಜತ್ ಪಾಟಿದಾರ್ ತಂಡದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡರು. ಅಂತಿಮವಾಗಿ 4 ವಿಕೆಟ್ ಕಳೆದುಕೊಂಡು 108 ರನ್ಗಳಿಸುವ ಮೂಲಕ ಮಧ್ಯ ಪ್ರದೇಶ ತಂಡವು 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಜಯದೊಂದಿಗೆ 69 ವರ್ಷಗಳ ಬಳಿಕ ಮತ್ತೊಮ್ಮೆ ರಣಜಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.
ಮಧ್ಯ ಪ್ರದೇಶ ತಂಡವು ರಣಜಿ ಟ್ರೋಫಿ ಗೆದ್ದಿರುವುದು 1953 ರಲ್ಲಿ. ಅಂದು ಹೋಲ್ಕರ್ ಕ್ರಿಕೆಟ್ ಟೀಮ್ ಹೆಸರಿನಲ್ಲಿ ಮಧ್ಯಪ್ರದೇಶದ ಆಟಗಾರರು ರಣಜಿ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದರು. ಅಂದರೆ ಮಧ್ಯ ಪ್ರದೇಶ ರಾಜ್ಯವಾದ ಬಳಿಕ ಮೊದಲ ಬಾರಿಗೆ ರಾಜ್ಯ ತಂಡವು ರಣಜಿ ಟ್ರೋಫಿಯನ್ನು ಎತ್ತಿಹಿಡಿದಿದೆ. ಈ ಮೂಲಕ ಮಧ್ಯ ಪ್ರದೇಶ ಆಟಗಾರರು ಹೊಸ ಇತಿಹಾಸ ನಿರ್ಮಿಸಿದೆ.