Friday, 22nd November 2024

MS Dhoni : ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಪರ ಧೋನಿ ಆಡುವುದು ಖಚಿತ

MS Dhoni'

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ತಮ್ಮ ಅಭಿಯಾನ ಮುಂದುವರಿಸಲು ಎಂಎಸ್ ಧೋನಿ (MS Dhoni) ಸಜ್ಜಾಗಿದ್ದಾರೆ. ಮೆಗಾ ಹರಾಜಿಗೆ ಮುಂಚಿತವಾಗಿ ಕೀಪರ್-ಬ್ಯಾಟ್ಸ್ಮನ್ ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಎಂಎಸ್ ಧೋನಿ ಐಪಿಎಲ್ 2025ರಲ್ಲಿ ಆಡಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಸ್ವತಃ ಕ್ರಿಕ್‌ಬಜ್‌ಗೆ ಖಚಿತಪಡಿಸಿದ್ದಾರೆ. ಐದು ಬಾರಿ ಚಾಂಪಿಯನ್ಸ್ ಆಗಿರುವ ತಂಡದಲ್ಲಿ ಮುಂದುವರಿಯುವ ಅವರ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಕಾಶಿ ವಿಶ್ವನಾಥನ್ ಮಾತನಾಡಿ “ಧೋನಿ ಸಿದ್ಧರಾಗಿರುವಾಗ ನಮಗೆ ಇನ್ನೇನು ಬೇಕು? ನಾವು ಸಂತೋಷವಾಗಿದ್ದೇವೆ. ಎಂದು ಹೇಳಿದ್ದಾರೆ. ಮುಂದಿನ ಆವೃತ್ತಿಯಲ್ಲಿ ಆಡುವ ಬಯಕೆಯನ್ನು ಎಂಎಸ್ ಧೋನಿ ಸ್ವತಃ ಖಚಿತಪಡಿಸಿದ ನಂತರ ಈ ಹೇಳಿಕೆ ಬಂದಿದೆ. ಕಾರ್ಯಕ್ರಮವೊಂದರಲ್ಲಿ, ಧೋನಿ ಮಾತನಾಡಿ ತಮ್ಮ ಕ್ರಿಕೆಟ್‌ ಕೊನೆಯ ಕೆಲವು ವರ್ಷಗಳನ್ನು ಆನಂದಿಸಲು ಬಯಸುತ್ತೇನೆ ಎಂದು ಹೇಳಿದ್ದರು. ಭಾವನೆಗಳನ್ನು ಬದಿಗಿಡುವುದು ಸುಲಭವಲ್ಲವಾದರೂ ಆಟವನ್ನು ಆನಂದಿಸಲು ಬಯಸುತ್ತೇನೆ ಎಂದು ಹೇಳಿದ್ದರು.

ಐಪಿಎಲ್ ಆಡಲು ಅವರು ತಮ್ಮನ್ನು ತಾವು ಸದೃಢವಾಗಿರಿಸಿಕೊಳ್ಳಬೇಕು. ಅದಕ್ಕಿಂತ ಮುಖ್ಯವಾಗಿ, ಕೂಲ್ ಆಗಿರಲು ಬಯಸುತ್ತೇನೆ ಎಂದು ಟೈಮ್ಸ್ ಆಫ್ ಇಂಡಿಯಾ ಜತೆ ಧೋನಿ ಹೇಳಿದ್ದರು.

ಇನ್ನೂ ಕೆಲವು ವರ್ಷಗಳ ಕ್ರಿಕೆಟ್ ಅನ್ನು ಅನುಭವಿಸಲು ಬಯಸುತ್ತೇನೆ. ನೀವು ಕ್ರಿಕೆಟ್ ಅನ್ನು ವೃತ್ತಿಪರ ಕ್ರೀಡೆಯಂತೆ ಆಡಿದಾಗ ಅದನ್ನು ಆಟದಂತೆ ಆನಂದಿಸುವುದು ಕಷ್ಟ. ಆದರೆ ಈಗ ಆಟವಾಗಿ ಆಡುವೆ ಎಂದು ಹೇಳಿದ್ದಾರೆ.

ಇನ್ಯಾರು ಇರುತ್ತಾರೆ ತಂಡದಲ್ಲಿ

ರವೀಂದ್ರ ಜಡೇಜಾ ಋತುರಾಜ್ ಗಾಯಕ್ವಾಡ್ ಮತ್ತು ಮಥೀಶಾ ಪಥಿರಾನಾ ಅವರನ್ನು ಸಿಎಸ್‌ಕೆ ಉಳಿಸಿಕೊಳ್ಳಲಿದೆ.
ತಂಡದ ಉಳಿಸಿಕೊಳ್ಳುವಿಕೆಯನ್ನು ಅಂತಿಮಗೊಳಿಸಲು ಎಂಎಸ್ ಧೋನಿ ಫ್ರಾಂಚೈಸಿ ಮಾಲೀಕ ಎನ್ ಶ್ರೀನಿವಾಸನ್ ಅವರ ಜತೆ ಮಾತನಾಡಲಿದ್ದಾರೆ. ಕೀಪರ್-ಬ್ಯಾಟರ್‌ ಅನ್ನು ಅನ್ಕ್ಯಾಪ್ಡ್ ವಿಭಾಗದಲ್ಲಿ 4 ಕೋಟಿ ರೂ.ಗೆ ಉಳಿಸಿಕೊಳ್ಳಲಾಗುವುದು ಎಂದು ವರದಿಯಾಗಿದೆ. ಈ ನಿಯಮವನ್ನು ಬಿಸಿಸಿಐ ಇತ್ತೀಚೆಗೆ ಪರಿಚಯಿಸಿತ್ತು. 5 ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡದ ಆಟಗಾರರನ್ನು ಅನ್ಕ್ಯಾಪ್ಡ್ ಆಟಗಾರರಾಗಿ ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ.

ಇದನ್ನೂ ಓದಿ: Virat Kohli : ರನ್ ಗಳಿಸಲಾಗದ ಸಿಟ್ಟು; ಬ್ಯಾಟ್‌ನಿಂದ ಹೊಡೆದು ಐಸ್‌ ಬಾಕ್ಸ್ ಪುಡಿಮಾಡಿದ ಕೊಹ್ಲಿ

ರವೀಂದ್ರ ಜಡೇಜಾ ಅವರನ್ನು ತಂಡಕ್ಕೆ ಉಳಿಸಿಕೊಳ್ಳಲಾಗುವುದು ಮತ್ತು ನಂತರ ಋತುರಾಜ್ ಗಾಯಕ್ವಾಡ್ ಅವರನ್ನು ಉಳಿಸಿಕೊಳ್ಳಲಾಗುವುದು ಎಂದು ವರದಿಗಳು ತಿಳಿಸಿವೆ. ಮಥೀಶಾ ಪಥಿರಾನಾ ಅವರನ್ನು 3ನೇ ಆಟಗಾರನಾಗಿ ಉಳಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಶಿವಂ ದುಬೆ, ಡೆವೊನ್ ಕಾನ್ವೇ ಮತ್ತು ಅನ್ಕ್ಯಾಪ್ಡ್ ಆಟಗಾರ ಸಮೀರ್ ರಿಜ್ವಿ ಉಳಿದುಕೊಳ್ಳಬಹುದು.