Sunday, 15th December 2024

ಕಿಕ್ ಬಾಕ್ಸಿಂಗ್: ಮೈಸೂರು ಬಾಕ್ಸರ್ ಸಾವು

ಮೈಸೂರು: ಬೆಂಗಳೂರಿನಲ್ಲಿ ನಡೆದ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಮೈಸೂರು ಬಾಕ್ಸರ್ ಮೃತಪಟ್ಟಿದ್ದಾರೆ.

ಬೆಂಗಳೂರಿನ ಕೆಂಗೇರಿಯಲ್ಲಿ K1 ಕಿಕ್ ಬಾಕ್ಸರ್ ಆರ್ಗನೈಸೇಷನ್ ವತಿಯಿಂದ ಸ್ಪರ್ಧೆ ನಡೆದಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮೈಸೂರು ಯುವಕ‌ ನಿಖಿಲ್ (24) ನಿಧನ ಹೊಂದಿದ್ದಾರೆ. ರಿಂಗ್‌ನಲ್ಲಿ ಸೆಣಸಾಡುತ್ತಿದ್ದ ವೇಳೆ ಎದುರಾಳಿ ಏಟಿಗೆ ನಿಖಿಲ್ ಕುಸಿದು ಬಿದ್ದರು .

ತಲೆಗೆ ಹೊಡೆದ ಒಂದೇ ಏಟಿಗೆ ಬಾಕ್ಸಿಂಗ್ ರಿಂಗ್‌ನಲ್ಲಿ ಕೆಳಗೆ ಬಿದ್ದಿದ್ದ ಬಾಕ್ಸರ್‌ ನಿಖಿಲ್ ಅಸ್ವಸ್ಥರಾಗಿದ್ದರು. ತಕ್ಷಣ ನಿಖಿಲ್ ಅವರನ್ನ ಬೆಂಗಳೂರಿನ‌ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿಖಿಲ್ ಕೆಳಗೆ ಬೀಳುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿತ್ತು.

ನಿಖಿಲ್‌ ಸಾವಿನ ಬಗ್ಗೆ ಅವರ ಪೋಷಕರು ಆಯೋಜಕರ ವಿರುದ್ಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಆಯೋಜಕರು ಹಾಗೂ ಕೋಚ್‌ ಅವರ ನಿರ್ಲಕ್ಷದಿಂದಲೇ ತಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಆಯೋಜಕರನ್ನು ವಿಚಾರಿಸಿದಾಗ ಸ್ಪರ್ಧೆ ನಡೆಯುವ ರಿಂಗ್‌ನಲ್ಲಿ ನೆಲಕ್ಕೆ ಹಾಸಿದ್ದ ಸ್ಪಂಜ್‌ ತೆಳುವಾಗಿತ್ತು. ಈ ವೇಳೆ ನೆಲಕ್ಕೆ ಬಿದ್ದ ನಿಖಿಲ್‌ ತಲೆಗೆ ಪೆಟ್ಟಾಗಿತ್ತು. ಪ್ಯಾರಮೆಡಿಕಲ್‌ ಸಿಬ್ಬಂದಿಯೂ ಅಲ್ಲಿ ಇರಲಿಲ್ಲ. ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಿರಲಿಲ್ಲ. ಆಯೋಜ ಕರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಿದರು.