Friday, 22nd November 2024

ಬೌಲರ್ ಟಿ.ನಟರಾಜನ್ ಕ್ರಿಕೆಟ್ ಸ್ಟೇಡಿಯಂ ಸಿದ್ದ: ಜೂ.23 ರಂದು ಉದ್ಘಾಟನೆ

ಚೆನ್ನೈ: ಭಾರತೀಯ ಎಡಗೈ ವೇಗದ ಬೌಲರ್ ಟಿ.ನಟರಾಜನ್ ಅವರು ತಮಿಳುನಾಡಿನ ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿಯಲ್ಲಿ ತಮ್ಮ ಸ್ವಂತ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಿದ್ದು, ಜೂ.23 ರಂದು ಉದ್ಘಾಟನೆಯಾಗಲಿದೆ. ಇದಕ್ಕೆ ‘ನಟರಾಜನ್ ಕ್ರಿಕೆಟ್ ಮೈದಾನ’ ಎಂದು ನಾಮಕರಣ ಮಾಡಲಾಗಿದೆ.

ನನ್ನ ಕನಸಿನ ಸಾಕಾರ ಯೋಜನೆಯಾದ ‘ನಟರಾಜನ್ ಕ್ರಿಕೆಟ್ ಗ್ರೌಂಡ್’ ಅನ್ನು ಜೂನ್ 23ರಂದು ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿಯಲ್ಲಿ ಪ್ರಾರಂಭಿಸ ಲಿದ್ದೇವೆ. ಇದು ತುಂಬಾ ಸಂತೋಷದ ಸಂಗತಿ ಎಂದು ಬರೆದುಕೊಂಡಿದ್ದಾರೆ.

ಭಾರತದ ವಿಕೆಟ್ ಕೀಪರ್, ಬ್ಯಾಟರ್ ದಿನೇಶ್ ಕಾರ್ತಿಕ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸ ಲಿದ್ದಾರೆ. ಅಂದು ಬೆಳಗ್ಗೆ ಕ್ರಿಕೆಟ್ ಮೈದಾನದ ಉದ್ಘಾಟನೆ ನೆರವೇರಿಸಲಿದ್ದಾರೆ.

ಐಪಿಎಲ್​ ಫ್ರಾಂಚೈಸಿಯಾದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಶಿ ವಿಶ್ವನಾಥನ್, ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ. ಅಶೋಕ್​ ಸಿಗಮಣಿ ಮತ್ತು ಚಲನಚಿತ್ರ ನಟ ಯೋಗಿ ಬಾಬು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು ಎಂದು ವರದಿಯಾಗಿದೆ.

2020ರಲ್ಲಿ ಟೀಂ ಇಂಡಿಯಾ ಕದ ತಟ್ಟಿದ ಆಟಗಾರ, ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾದರು. ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಟರಾಜನ್, ಬಳಿಕ ಟಿ20 ಕ್ರಿಕೆಟ್‌ಗೂ ಪಾದಾರ್ಪಣೆ ಮಾಡಿದ್ದರು. ಟೆಸ್ಟ್ ಸರಣಿಯಲ್ಲೂ ಎಂಟ್ರಿ ಕೊಡುವ ಮೂಲಕ ಒಂದೇ ಪ್ರವಾಸದಲ್ಲಿ ಮೂರು ಮಾದರಿಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ತಮಿಳು ಪ್ರೀಮಿಯರ್ ಲೀಗ್‌ನಲ್ಲಿ (ಟಿಪಿಎಲ್) ಅವರು ಬಾಲ್ಸಿ ತಿರುಚ್ಚಿಯನ್ನೂ ಪ್ರತಿನಿಧಿಸುತ್ತಿದ್ದಾರೆ.