Sunday, 15th December 2024

Neeraj Chopra: ವಿಶ್ವ ಅಥ್ಲೆಟಿಕ್ ಮ್ಯೂಸಿಯಂ ಸೇರಿದ ನೀರಜ್‌ ಚೋಪ್ರಾ ಒಲಿಂಪಿಕ್ಸ್‌ ಜೆರ್ಸಿ

ಮೊನಾಕೋ: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ, ಅವಳಿ ಒಲಿಂಪಿಕ್‌ ಪದಕ ವಿಜೇತ ನೀರಜ್‌ ಚೋಪ್ರಾ(Neeraj Chopra) ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(Paris Olympics) ಧರಿಸಿದ್ದ ಟೀ ಶರ್ಟ್ ಸ್ಪರ್ಧಾತ್ಮಕ ಕಲಾಕೃತಿಗಳ ವಿಶ್ವ ಅಥ್ಲೆಟಿಕ್ಸ್ ಪಾರಂಪರಿಕ ಸಂಗ್ರಹಾಲಯದಲ್ಲಿ(World Athletic Heritage Collection) ಪ್ರದರ್ಶನಕ್ಕಿರಿಸಲಾಗಿದೆ. ಈ ವಿಶೇಷ ಗೌರವಕ್ಕೆ ಪಾತ್ರರಾದ ವಿಶ್ವದ 23 ಅಥ್ಲೀಟ್‌ಗಳಲ್ಲಿ ನೀರಜ್ ಒಬ್ಬರೆನಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ನೀರಜ್, ತಮ್ಮ ಜೆರ್ಸಿಯನ್ನು ಮ್ಯೂಸಿಯಂ ಆಫ್ ವರ್ಲ್ಡ್ ಅಥ್ಲೆಟಿಕ್ಸ್ (ಎಂಒಡಬ್ಲ್ಯುಎ)ಗೆ ನೀಡಿದ್ದಾರೆ. ಈ ಮ್ಯೂಸಿಯಂನಲ್ಲಿ ಇದುವರೆಗೆ ನೀರಜ್ ಸೇರಿ ಒಟ್ಟು 23 ಅಥ್ಲೆಟ್‌ಗಳ ವಿವಿಧ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ.

2021ರ ಟೋಕಿಯೋ ಗೇಮ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್, ಹಾಲಿ ವರ್ಷ ಪ್ಯಾರಿಸ್ ಗೇಮ್ಸ್‌ನ ಬಳಿಕ ಧರಿಸಿದ್ದ ಟೀ ಶರ್ಟ್ ಅನ್ನು ಎಂಒಡಬ್ಲುೃಎಗೆ ಕೊಡುಗೆಯಾಗಿ ನೀಡಿದ್ದರು. ಚೋಪ್ರಾ ಜತೆಗೆ ಯೂಕ್ರೇನ್‌ನ ಹೈಜಂಪ್ ಪಟು ಯಾರೋಸ್ಲಾವಾ ಮಹುಚಿಖ್, ವರ್ಷದ ಮಹಿಳಾ ಫೀಲ್ಡ್ ಅಥ್ಲೀಟ್ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ಪದಕ ವಿಜೇತ ಟ್ರಿಪಲ್ ಜಂಪರ್ ಥಿಯಾ ಲಾಫೊಂಡ್ ಅವರು ನೀಡಿರುವ ವಸ್ತುಗಳನ್ನು ಪಾರಂಪರಿಕ ಸಂಗ್ರಹಾಲದಲ್ಲಿ ಪ್ರದರ್ಶನಕ್ಕಿಡಲಾಗಿದೆ.

ನೀರಜ್‌ ಜೆರ್ಸಿ ಮಾತ್ರವಲ್ಲದೆ 1960ರ ಒಲಿಂಪಿಕ್ಸ್‌ನ ಪದಕ ವಿಜೇತರಾದ ವ್ರೋಮಿಯಾ ಟೈಯುಸ್ ಮತ್ತು ಬಿಲ್ಲಿ ಮಿಲ್ಸ್ ಮತ್ತು 1980ರ 100 ಮೀ ಚಾಂಪಿಯನ್ ಅಲನ್ ವೆಲ್ಸ್, 2000 ಮತ್ತು 2008ರ ಒಲಿಂಪಿಕ್ಸ್ ಹೆಪ್ಟಾಥ್ಲಾನ್ ಚಿನ್ನದ ಪದಕ ವಿಜೇತರಾದ ಡೆನಿಸ್ ಲೆವಿಸ್, ನತಾಟಿಯಾ ಡೊಬ್ರಯಾನ್‌ಸ್ಕ ತಾವೂ ಗೆದ್ದಿರುವ ಪದಕಗಳನ್ನು ದಾನವಾಗಿ ನೀಡಿದ್ದಾರೆ.