Saturday, 23rd November 2024

Neeraj Chopra: ನೂತನ ಕೋಚ್‌ ಜತೆ ಅಭ್ಯಾಸ ಆರಂಭಿಸಿದ ನೀರಜ್ ಚೋಪ್ರಾ

ನವದೆಹಲಿ: ಅವಳಿ ಒಲಿಂಪಿಕ್ಸ್ ಪದಕ ವಿಜೇತ ಹಾಗೂ ವಿಶ್ವ ಚಾಂಪಿಯನ್, ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಅವರು ತಮ್ಮ ನೂತನ ಕೋಚ್‌ ಆಗಿರುವ ಜೆಕ್ ಗಣರಾಜ್ಯದ ದಂತಕಥೆ ಜಾನ್ ಝೆಲೆಜ್ನಿ ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. 58 ವರ್ಷದ ಜಾನ್ ಝೆಲೆಜ್ನಿ(Jan Železný
) ಒಲಿಂಪಿಕ್ಸ್‌ನಲ್ಲಿ ಒಟ್ಟು ನಾಲ್ಕು (3 ಚಿನ್ನ, 1 ಬೆಳ್ಳಿ,), ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನಲ್ಲಿ ಒಟ್ಟು ಐದು (3,ಚಿನ್ನ, 2 ಕಂಚು) ಪದಕ ಗೆದ್ದ ಸಾಧಕ.

ಈ ಹಿಂದೆ ನೀರಜ್‌ ಅವರ ಕೋಚ್‌ ಆಗಿದ್ದ ಜರ್ಮನಿಯ ಕ್ಲಾಸ್‌ ಬರ್ಟೋನೀಟ್ಜ್‌ ಅವರು ಕೌಟುಂಬಿಕ ಬದ್ಧತೆಯ ಕಾರಣ ನೀಡಿ ಐದು ವರ್ಷಗಳ ಒಪ್ಪಂದ ಕೊನೆಗೊಳಿಸಿದ್ದರು. ನೀರಜ್ ಟೋಕಿಯೊ ಒಲಿಂಪಿಕ್ಸ್ ಚಿನ್ನ, ಈ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ ಬೆಳ್ಳಿ ಸೇರಿದಂತೆ ಹಲವು ಪದಕಗಳನ್ನು ಗೆಲ್ಲುವಲ್ಲಿ 75 ವರ್ಷ ವಯಸ್ಸಿನ ಬರ್ಟೋನೀಟ್ಜ್‌ ಅವರು ಮಾರ್ಗದರ್ಶನ ನೀಡಿದ್ದರು.

ಬರ್ಟೋನೀಟ್ಜ್‌ ಬಗ್ಗೆ ನೀರಜ್‌ ಭಾವನಾತ್ಮಕ ಪತ್ರವೊಂದನ್ನು ಬರೆದಿದಿದ್ದರು. ʼನಿಮ್ಮ ನಗು ಮತ್ತು ತಮಾಷೆಯ ಮಾತುಗಳು ಮನಸ್ಸಿನಿಂದ ಎಂದಿಗೂ ಮರೆಯಾಗುವುದಿಲ್ಲ. ನನಗೆ ನೀವು ಮಾರ್ಗದರ್ಶಕನಿಗಿಂತ ಹೆಚ್ಚಿನ ಸ್ಥಾನದಲ್ಲಿದ್ದವರು. ನೀವು ಕಲಿಸಿದ ಎಲ್ಲವೂ ಅಥ್ಲೀಟ್‌ ಮತ್ತು ವ್ಯಕ್ತಿಯಾಗಿ ನನಗೆ ನೆರವಾಗಿದೆ. ಪ್ರತಿ ಸ್ಪರ್ಧೆಗಳಲ್ಲಿ ನಾನು ಮಾನಸಿಕ ಮತ್ತು ದೈಹಿಕವಾಗಿ ಸಜ್ಜಾಗುವಂತೆ ನೋಡಿಕೊಂಡಿದ್ದೀರಿ’ ಎಂದು ಚೋಪ್ರಾ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ PM Modi: ಚುರ್ಮಾ ಸವಿದು ನೀರಜ್‌ ತಾಯಿಗೆ ಭಾವುಕ ಪತ್ರ ಬರೆದ ಮೋದಿ

ನೂತನ ಕೋಚ್‌ ಜತೆ ಅಭ್ಯಾಸ ಆರಂಭಿಸಿರುವ ವಿಚಾರವನ್ನು ನೀರಜ್‌ ತಮ್ಮ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಾನು ಜಾವೆಲಿನ್‌ ಕಲಿಕೆ ಆರಂಭಿಸಿದ್ದಾಗ ಜಾನ್ ಝೆಲೆಜ್ನಿ ಅವರ ಎಸೆತಗಳನ್ನು ಮೊಬೈಲ್‌ನಲ್ಲಿ ನೋಡಿ ಅವರ ತಂತ್ರ ಮತ್ತು ನಿಖರತೆಯನ್ನು ಕಲಿಯುವ ಪ್ರಯತ್ನ ಮಾಡಿದ್ದೆ. ಮುಂದೊಂದು ದಿನ ಅವರು ನನಗೆ ಕೋಚ್‌ ಆಗಬಲ್ಲರು ಎಂಬುದನ್ನು ಕನಸಿನಲ್ಲೂ ಊಹೆ ಮಾಡಿರಲಿಲ್ಲ. ಇದೀಗ ಅವರೇ ನನಗೆ ಕೋಚ್‌ ಆಗಿದ್ದಾರೆ. ಅವರೊಂದಿಗೆ ಕೆಲಸ ಮಾಡುವುದು ಅಮೂಲ್ಯವಾದ ಕ್ಷಣ ಎಂದು ನಾನು ನಂಬುತ್ತೇನೆʼ ಎಂದು ಚೋಪ್ರಾ ಬರೆದುಕೊಂಡಿದ್ದಾರೆ.