Saturday, 14th December 2024

New Zealand Cricket: ನ್ಯೂಜಿಲ್ಯಾಂಡ್‌ ಟೆಸ್ಟ್‌ ತಂಡಕ್ಕೆ ಲ್ಯಾಥಮ್‌ ನೂತನ ನಾಯಕ

New Zealand Cricket

ವೆಲ್ಲಿಂಗ್ಟನ್‌: ಭಾರತ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ನ್ಯೂಜಿಲ್ಯಾಂಡ್‌ ಟೆಸ್ಟ್‌(New Zealand Cricket) ತಂಡದ ನಾಯಕ ಟಿಮ್‌ ಸೌಥಿ(Tim Southee) ಈ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ. ನೂತನ ನಾಯಕನಾಗಿ ಎಡಗೈ ಬ್ಯಾಟರ್‌ ಟಾಮ್‌ ಲ್ಯಾಥಮ್‌(Tom Latham) ಆಯ್ಕೆಯಾಗಿದ್ದಾರೆ. ಭಾರತ ವಿರುದ್ಧದ ಸರಣಿ ಅವರಿಗೆ ಮೊದಲ ಅಗ್ನಿ ಪರೀಕ್ಷೆಯಾಗಿದೆ. ಭಾರತ ಮತ್ತು ಕಿವೀಸ್‌ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಅಕ್ಟೋಬರ್ 16 ರಿಂದ ಆರಂಭಗೊಳ್ಳಲಿದೆ.

2022ರ ಕೊನೆಯಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದಿಂದ ಕೆಳಗಿಳಿದ ನಂತರ ಟಿಮ್ ಸೌಥಿ ಅವರು ನ್ಯೂಜಿಲ್ಯಾಂಡ್‌ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಸೌಥಿ ನಾಯಕತ್ವದಲ್ಲಿ ಕಿವೀಸ್‌ ತಂಡ 14 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ಪೈಕಿ ತಲಾ 6 ಪಂದ್ಯಗಳಲ್ಲಿ ಸೋಲು-ಗೆಲುವು ಮತ್ತು 2 ಪಂದ್ಯಗಳು ಡ್ರಾಗೊಂಡಿದೆ.

“ನನ್ನ ವೃತ್ತಿಜೀವನದುದ್ದಕ್ಕೂ ತಂಡವೇ ನನಗೆ ಮೊದಲು. ಹೀಗಾಗಿ ತಂಡದ ಹಿತದೃಷ್ಟಿಯಿಂದ ನಾನು ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಇಷ್ಟು ದಿನ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಸೌಭಾಗ್ಯ. ನೂತನ ನಾಯಕ ಲ್ಯಾಥಮ್‌ಗೆ ಸಂಪೂರ್ಣ ಬೆಂಬಲ ನೀಡುವ ಮೂಲಕ ತಂಡದ ಗೆಲುವಿಗಾಗಿ ಶ್ರಮಿಸುವೆ” ಎಂದು ಟಿಮ್‌ ಸೌಥಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಲ್ಯಾಥಮ್‌ ಏಕದಿನ ಮತ್ತು ಟಿ20 ಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದರು. ಇದೀಗ ಟೆಸ್ಟ್‌ ಸೇರಿ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿಯೂ ತಂಡವನ್ನು ಮುನ್ನಡೆಸಲಿದ್ದಾರೆ.

ಇದನ್ನೂ ಓದಿ Womens T20 World Cup: ಮಹಿಳಾ ಟಿ20 ವಿಶ್ವಕಪ್‌ ಸಾಧಕಿಯರ ಸಾಧನೆ ಪಟ್ಟಿ

ನ್ಯೂಜಿಲ್ಯಾಂಡ್‌ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ ಕ್ಲೀನ್‌ ಸ್ವೀಪ್‌ ಮಾಡಿದರೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಫೈನಲ್‌ ಸ್ಥಾನ ಬಹುತೇಕ ಖಾತ್ರಿಯಾಗಲಿದೆ. ಫೈನಲ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಕಿವೀಸ್‌ಗೆ ಸರಣಿ ಗೆಲ್ಲಲೇ ಬೇಕಾದ ಒತ್ತಡವಿದೆ. ಹೀಗಾಗಿ ಈ ಟೆಸ್ಟ್‌ ಸರಣಿ ಇತ್ತಂಡಗಳಿಗೂ ಬಹಳ ಪ್ರಾಮುಖ್ಯತೆ ಪಡೆದಿದೆ.

ಮೊದಲ ಪಂದ್ಯ ಅಕ್ಟೋಬರ್ 16 ರಿಂದ 20 ರವರೆಗೆ ಬೆಂಗಳೂರಿನಲ್ಲಿ, ಎರಡನೇ ಪಂದ್ಯ ಅಕ್ಟೋಬರ್ 24 ರಿಂದ 28 ರವರೆಗೆ ಪುಣೆಯಲ್ಲಿ, ಮೂರನೇ ಟೆಸ್ಟ್‌ ನವೆಂಬರ್‌ 1 ರಿಂದ 5ರ ತನಕ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.