Saturday, 23rd November 2024

ಟೆಸ್ಟ್‌ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ

ವೆಲ್ಲಿಂಗ್ಟನ್‌: ಭಾರತದ ನೋಯ್ಡಾದಲ್ಲಿ ನಡೆಯಲಿರುವ ಟೆಸ್ಟ್‌ ಸರಣಿಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಮೈಕಲ್ ಬ್ರೇಸ್‌ಬೆಲ್ ತಂಡಕ್ಕೆ ಮರಳಿದ್ದಾರೆ. ಅವರು ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಮಾರ್ಚ್ 2023 ರಲ್ಲಿ ಆಡಿದ್ದರು.

ನ್ಯೂಜಿಲೆಂಡ್ ತಂಡವನ್ನು ಅನುಭವಿ ಟೀಮ್ ಸೌಥಿ ಮುನ್ನಡೆಸುತ್ತಿದ್ದು, ಟಾಮ್‌ ಲಾಥಮ್‌ಗೆ ಉಪನಾಯಕ ಪಟ್ಟ ಕಟ್ಟಲಾಗಿದೆ.

ನ್ಯೂಜಿಲೆಂಡ್ ತಂಡ ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್ ಪಂದ್ಯವನ್ನು ಗ್ರೇಟರ್ ನೋಯ್ಡಾದಲ್ಲಿ ಆಡಲಿದೆ. ಬಳಿಕ ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಇದಕ್ಕಾಗಿ ನ್ಯೂಜಿಲೆಂಡ್‌ನ ಟೆಸ್ಟ್ ತಂಡವನ್ನು ಪ್ರಕಟಿಸಲಾಗಿದೆ.

ಭಾರತದಲ್ಲಿ ಅಫ್ಘಾನಿಸ್ತನ ವಿರುದ್ಧ ಟೆಸ್ಟ್‌ ಸರಣಿ ಆಗಿದ್ದರಿಂದ ಕಿವೀಸ್‌ ತಂಡದಲ್ಲಿ ಐವರು ಸ್ಪಿನ್ ಬೌಲರ್‌ಗಳಿಗೆ ಅವಕಾಶ ನೀಡಲಾಗಿದೆ. ಈ ಸರಣಿಗೆ ಬಲಿಷ್ಠ ತಂಡವನ್ನು ನ್ಯೂಜಿಲೆಂಡ್ ಪ್ರಕಟಿಸಿದೆ. ಕಿವೀಸ್‌ ಐವರು ಸ್ಪಿನ್‌ ಬೌಲರ್‌ಗಳೊಂದಿಗೆ ಪ್ರಯಾಣ ಬೆಳೆಸಲಿದೆ. ಅನುಭವಿ ಸ್ಪಿನ್ ಬೌಲರ್‌ಗಳಾದ ಮಿಚೆಲ್‌ ಸ್ಯಾಂಟ್ನರ್‌, ಅಜಾಜ್‌ ಪಟೇಲ್‌, ಯುವ ಆಟಗಾರ ರಚಿನ್ ರವೀಂದ್ರ, ಗ್ಲೇನ್ ಫಿಲಿಲ್ಸ್‌ ಮತ್ತು ಮೈಕೆಲ್‌ ಬ್ರೇಸ್‌ ಬೆಲ್‌ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಯುವ ವೇಗದ ಬೌಲರ್‌ಗಳೊಂದಿಗೆ ಕಿವೀಸ್ ತಂಡ ಪ್ರವಾಸ ಬೆಳೆಸಲಿದೆ. ವೇಗದ ಬೌಲರ್‌ಗಳಾದ ವಿಲ್ ಒ’ರೂರ್ಕ್ ಮತ್ತು ಬೆನ್ ಸಿಯರ್ಸ್ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ.

ಅನುಭವಿ ಬ್ಯಾಟರ್‌ಗಳಾದ ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಟಾಮ್ ಬ್ಲಂಡೆಲ್ ಅವರೂ ಸಹ ಈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಆಲ್‌ರೌಂಡರ್‌ ಕೋಟಾದಲ್ಲಿ ಡ್ಯಾರಿಲ್‌ ಮಿಚೆಲ್‌ ಹಾಗೂ ರಚಿನ್ ರವೀಂದ್ರ ಸ್ಥಾನ ಪಡೆದಿದ್ದಾರೆ.

ಟೆಸ್ಟ್‌ ಸರಣಿಗೆ ನ್ಯೂಜಿಲೆಂಡ್‌ನ ಟೆಸ್ಟ್ ತಂಡ:

ಟಿಮ್ ಸೌಥಿ (ನಾಯಕ), ಟಾಮ್ ಲ್ಯಾಥಮ್ (ಉಪನಾಯಕ), ಮೈಕೆಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಡ್ಯಾರಿಲ್ ಮಿಚೆಲ್, ವಿಲ್ ಓ’ರೂರ್ಕ್, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಸಿಯರ್ಸ್, ಕೇನ್ ವಿಲಿಯಮ್ಸನ್, ವಿಲ್ ಯಂಗ್.