IND vs ENG Test Series: ಇಂಗ್ಲೆಂಡ್ ಪ್ರವಾಸದಲ್ಲಿ ಬುಮ್ರಾಗಿಲ್ಲ ಉಪನಾಯಕ ಸ್ಥಾನ!
ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ನಲ್ಲಿ ಭಾರತ ಎ ತಂಡ 3 ಚತುರ್ದಿನ ಪಂದ್ಯಗಳಲ್ಲಿ ಆಡಲಿದೆ. ಈ ತಂಡದೊಂದಿಗೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ತೆರಳಲಿದ್ದಾರೆ ಎನ್ನಲಾಗಿದೆ. ಮುಂಚಿತವಾಗಿಯೇ ಇಂಗ್ಲೆಂಡ್ ಪರಿಸ್ಥಿತಿಯನ್ನು ಅಧ್ಯಯನ ಮಾಡುವುದು, ಮೀಸಲು ಕ್ರಿಕೆಟಿಗರ ಪ್ರತಿಭೆಗಳನ್ನು ತಿಳಿದುಕೊಳ್ಳುವುದು ಗಂಭೀರ್ ಉದ್ದೇಶ ಎನ್ನಲಾಗಿದೆ.


ನವದೆಹಲಿ: ಜೂನ್-ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ(IND vs ENG Test Series) ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ(Jasprit Bumrah)ಗೆ ಲೀಡರ್ಶಿಪ್ ಪಾತ್ರ ನೀಡದಿರಲು ಬಿಸಿಸಿಐ(BCCI) ನಿರ್ಧರಿಸಿದೆ. ಇದರಿಂದ ಅವರಿಗೆ ನಾಯಕತ್ವ ಅಥವಾ ಉಪನಾಯಕನ ಪಟ್ಟ ನೀಡಲಾಗುವುದಿಲ್ಲ ಎಂದು ವರದಿಯಾಗಿದೆ. ಕಳೆದ ಆಸ್ಟ್ರೆಲಿಯಾ ಪ್ರವಾಸದ ವೇಳೆ ಬುಮ್ರಾ ಭಾರತ ಟೆಸ್ಟ್ ತಂಡದ ಉಪನಾಯಕನಾಗಿದ್ದರು. ಜತೆಗೆ ನಾಯಕ ರೋಹಿತ್ ಶರ್ಮ(Rohit Sharma) ಗೈರಿನಲ್ಲಿ 2 ಪಂದ್ಯಗಳಲ್ಲಿ ಹಂಗಾಮಿ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು.
ಬುಮ್ರಾ ಮೇಲಿನ ಕಾರ್ಯದೊತ್ತಡವನ್ನು ಇಂಗ್ಲೆಂಡ್‌ನಲ್ಲಿ ತಗ್ಗಿಸಲು ಬಿಸಿಸಿಐ ಯೋಜನೆ ರೂಪಿಸಿದೆ. ಇದರನ್ವಯ ಬುಮ್ರಾ ಇಂಗ್ಲೆಂಡ್‌ನಲ್ಲಿ ಪ್ರಮುಖ 3 ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಆಡಬಹುದು. ಹೀಗಾಗಿ ಅವರಿಗೆ ಈ ಬಾರಿ ಲೀಡರ್ಶಿಪ್ ಪಾತ್ರ ನೀಡಲು ಬಿಸಿಸಿಐ ನಿರಾಕರಿಸಿದೆ. ಆಸ್ಟ್ರೇಲಿಯಾ ಪ್ರವಾಸದ 5 ಪಂದ್ಯಗಳಲ್ಲಿ ಆಡಿದ್ದ ಬುಮ್ರಾ ಅತಿಯಾದ ಕ್ರಿಕೆಟ್‌ನಿಂದ ಗಾಯಗೊಂಡಿದ್ದರು. ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೂ ಅಲಭ್ಯರಾಗಿದ್ದರು. ಇನ್ನೊಮ್ಮೆ ಅವರು ಗಾಯಗೊಂಡರೆ ಅವರ ಕ್ರಿಕೆಟ್ ಭವಿಷ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಇದನ್ನು ಮನಗಂಡ ಬಿಸಿಸಿಐ ಬುಮ್ರಾ ಕಾರ್ಯದೊತ್ತಡವನ್ನು ಕಡಿಮೆ ಮಾಡಲು ಮುಂದಾಗಿದೆ.
ನಾಯಕ ಮತ್ತು ಉಪನಾಯಕ ಎಲ್ಲ 5 ಪಂದ್ಯಗಳಲ್ಲೂ ಆಡಬೇಕು ಎಂಬುದು ಬಿಸಿಸಿಐ ಬಯಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಭವಿಷ್ಯದಲ್ಲಿ ಟೆಸ್ಟ್ ತಂಡದ ನಾಯಕನೂ ಆಗಬಲ್ಲ ಯುವ ಆಟಗಾರ ಶುಭಮನ್‌ಗಿಲ್‌ಗೆ ಉಪನಾಯಕನ ಸ್ಥಾನವನ್ನು ನೀಡಲು ಬಿಸಿಸಿಐ ಬಯಸಿದೆ ಎನ್ನಲಾಗಿದೆ. ಗಿಲ್ ಈಗಾಗಲೇ ಏಕದಿನ ತಂಡದಲ್ಲಿ ಉಪನಾಯಕನಾಗಿ ಬಡ್ತಿ ಪಡೆದಿದ್ದಾರೆ.
ಭಾರತದ ಇಂಗ್ಲೆಂಡ್ ಪ್ರವಾಸವು ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಆರಂಭಿಕ ಟೆಸ್ಟ್‌ನೊಂದಿಗೆ ಆರಂಭವಾಗಲಿದೆ. ಎಡ್ಜ್‌ಬಾಸ್ಟನ್, ಲಾರ್ಡ್ಸ್, ಓಲ್ಡ್ ಟ್ರಾಫರ್ಡ್ ಮತ್ತು ಕೆನ್ನಿಂಗ್ಟನ್ ಓವಲ್ ಉಳಿದ ನಾಲ್ಕು ಟೆಸ್ಟ್‌ಗಳನ್ನು ಆಯೋಜಿಸಲಿವೆ.
ಇದನ್ನೂ ಓದಿ IPL 2025: ಐಪಿಎಲ್‌ನಲ್ಲಿ ನೂತನ ದಾಖಲೆ ಬರೆದ ಪ್ಯಾಟ್ ಕಮಿನ್ಸ್
ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ನಲ್ಲಿ ಭಾರತ ಎ ತಂಡ 3 ಚತುರ್ದಿನ ಪಂದ್ಯಗಳಲ್ಲಿ ಆಡಲಿದೆ. ಈ ತಂಡದೊಂದಿಗೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ತೆರಳಲಿದ್ದಾರೆ ಎನ್ನಲಾಗಿದೆ. ಮುಂಚಿತವಾಗಿಯೇ ಇಂಗ್ಲೆಂಡ್ ಪರಿಸ್ಥಿತಿಯನ್ನು ಅಧ್ಯಯನ ಮಾಡುವುದು, ಮೀಸಲು ಕ್ರಿಕೆಟಿಗರ ಪ್ರತಿಭೆಗಳನ್ನು ತಿಳಿದುಕೊಳ್ಳುವುದು ಗಂಭೀರ್ ಉದ್ದೇಶ ಎನ್ನಲಾಗಿದೆ.